18-44 ವರ್ಷದವರಿಗೆ ಉಚಿತ ಲಸಿಕೆ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವೇ?: ಮೆಲ್ವಿನ್ ಡಿಸೋಜ
ದೇಶದ ಸರ್ವೋಚ್ಚ ನ್ಯಾಯಲಯ ಚಾಟಿ ಬೀಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಬಾರಿ ಜನರನ್ನು ಉದ್ದೇಶಿಸಿ ಮಾತನಾಡಿ 18 ರಿಂದ 44 ವರ್ಷದದವರಿಗೆ ಜೂನ್ 21 ರಿಂದ ಉಚಿತ ಲಸಿಕೆ ನೀಡಲಾಗುವುದು ಎಂದು ಘೋಷಿಸಿದ್ದರು ಮತ್ತು ಬಿಜೆಪಿ ಕಾರ್ಯಕರ್ತರು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರವನ್ನು ನೀಡಿದ್ದರು. ಅದರೆ ಸದ್ರಿ ಹೇಳಿಕೆ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವೇ? ಎಂದು ಕಾಪು ವಿಧಾನಸಭಾ ಕ್ಷೇತದ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ನ್ಯಾಯವಾದಿ ಮೆಲ್ವಿನ್ ಡಿಸೋಜ ಪ್ರಶ್ನಿಸಿದ್ದಾರೆ.
ಜೂ. 27 ಆದರೂ 18 ರಿಂದ 44 ವರ್ಷದವರಿಗೆ ಉಚಿತ ವ್ಯಾಕ್ಸಿನ್‌ನ ಸುದ್ದಿಯೇ ಇಲ್ಲ. ಭಾರೀ ಪ್ರಚಾರ ನೀಡಿದವರು ಬಾಯಿ ಮುಚ್ಚಿ ಕುಳಿತಿದ್ದಾರೆ. ಜನರು ಗ್ರಾಮ ಪಂಚಾಯತ್ ಸದಸ್ಯರನ್ನು ನಮಗೆ ಯಾವಾಗ ವ್ಯಾಕ್ಸಿನ್ ಸಿಗುತ್ತದೆ ಎಂದು ಪ್ರಶ್ನಿಸು ವಂತಾಗಿದೆ. ಒಂದು ಕಡೆಯಲ್ಲಿ ಕರೋನಾ ಮೂರನೇ ಅಲೆಯ ಭೂತ ಕಾಡುತ್ತಿದ್ದು. ಇತ್ತ ವ್ಯಾಕ್ಸಿನ್ ಕೂಡಾ ಸಿಗದೆ ಜನರು ಕಂಗಾಲಾಗಿದ್ದಾರೆ. ಮೂರನೇ ಅಲೆ ಬಂದು ಮತ್ತೆ ಮನೆಯಲ್ಲೇ ಕೂರಬೇಕಾದ ಪರಿಸ್ಥಿತಿ ಬಂದರೆ ಏನು ಮಾಡುವುದು ಎಂದು ತೋಚದೆ ಚಿಂತಿತ ರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕೂಡಾ 45 ವರ್ಷ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನ್ ಲಭ್ಯವಾಗಿಲ್ಲ ಹಾಗೂ ವ್ಯಾಕ್ಸಿನ್ ಬಗ್ಗೆ ಸರಿಯಾದ ಮಾಹಿತಿಯೂ ಅವರಲ್ಲಿ ಇಲ್ಲ. ವ್ಯಾಕ್ಸಿನ್ ಒದಗಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ೮೦೦ ರೂಪಾಯಿ ಕೊಟ್ಟು ಖಾಸಗಿ ಆಸ್ಪತ್ರಗಳಲ್ಲಿ ಲಸಿಕೆ ಪಡೆಯುವ ಶಕ್ತಿ ಬಡ ಜನರಿಗೆ ಇಲ್ಲ. ಆದುದರಿಂದ ಮೂರನೇ ಅಲೆ ಬರುವ ಮೊದಲೇ ಕೆಂದ್ರ ಸರಕಾರ ಕೂಡಲೇ 18 ರಿಂದ 44 ವರ್ಷದ ಎಲ್ಲರಿಗೂ ಉಚಿತ ವ್ಯಾಕ್ಸಿನ್ ಸಿಗುವಂತೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಕರೋನಾ ಮಹಾಮಾರಿಯಿಂದಾಗಿ ಹಾಗೂ ಬೆಲೆ ಏರಿಕೆಯಿಂದಾಗಿ ಜನರು ಆರ್ಥಿಕ ಸಂಕಷ್ಟದಲ್ಲಿದ್ದು, ವ್ಯಾಪಾರ ವಹಿವಾಟು ಸ್ಥಗಿತಗೊಂಡು ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಜೊತೆಗೆ ಇರಬೇಕಾದ ಕೇಂದ್ರ ಮತ್ತು ರಾಜ್ಯ ಸರಕಾರ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ. ರಾಜ್ಯ ಸರಕಾರ ಕೆಲವೊಂದು ವರ್ಗದವರಿಗೆ ಪ್ಯಾಕೇಜ್ ಘೋಷಿಸಿದ್ದು, ಪ್ಯಾಕೇಜ್‌ಗೆ ಅರ್ಜಿ ಸಲ್ಲಿಸಲು ಜನರು ಸೈಬರ್‌ಗೆ, ಪಂಚಾಯತ್‌ಗೆ, ಅಫಿದಾವಿತ್ ಮಾಡಲು ವಕೀಲರ ಕಚೇರಿಗೆ ಅಲೆಯುವಂತಾಗಿದೆ. ಹೀಗೆ 2000 ರೂಪಾಯಿ ಪ್ಯಾಕೇಜ್‌ಗೆ ಅರ್ಜಿ ಸಲ್ಲಿಸಲು 200 ರಿಂದ 300 ರೂಪಾಯಿ ಖರ್ಚು ಮಾಡುವಂತಾಗಿದೆ. ಹಣ ಖಾತೆಗೆ ಬರದಿದ್ದಲ್ಲಿ ಖರ್ಚು ಮಾಡಿದ ಹಣವನ್ನೂ ಕೂಡಾ ಕಳೆದುಕೊಳ್ಳುವ ಪರಿಸ್ಥಿತಿ. ಅರ್ಜಿ ಸಲ್ಲಿಸಲು ಬಡವರಿಗೆ ಸೂಕ್ತ ವ್ಯವಸ್ಥೆ ಮಾಡದಿರುವುದು ರಾಜ್ಯ ಸರಕಾರದ ವೈಫಲ್ಯವನ್ನು ತೋರಿಸುತ್ತದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ರಾಜ್ಯ ಸರಕಾರದ ಎಲ್ಲಾ ಬಿಜೆಪಿ ಶಾಸಕರ ಕಚೇರಿ ಮುಂದೆ ಸರಕಾರದ ವೈಫಲ್ಯಗಳ ಬಗ್ಗೆ ಪ್ರತಿಭಟನೆ ನಡೆಸಿದ್ದು, ಕಾಪು ಕ್ಷೇತ್ರದ ಶಾಸಕರ ಕಚೇರಿ ಮುಂದೆ ಕೂಡಾ ಮಾಜಿ ಸಚಿವರೂ, ಮಾಜಿ ಶಾಸಕರಾದ ವಿನಯ ಕುಮಾರ್ ಸೊರಕೆ ಹಾಗೂ ಕಾಪು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಜನರು ಅನುಭವಿಸುತ್ತಿರುವ ನೋವು ಹಾಗೂ ರಾಜ್ಯ ಸರಕಾರದ ವೈಫಲ್ಯಗಳ ಬಗ್ಗೆ ಪ್ರತಿಭಟನೆ ನಡೆದಿದ್ದು, ರಾಜ್ಯ ಸರಕಾರ ಇನ್ನೂ ಕೂಡಾ ಎಚ್ಚೆತ್ತುಗೊಳ್ಳದೇ ಇರುವುದು ಸರಕಾರಕ್ಕೆ ಜನಪರ ಕಾಳಜಿ ಇಲ್ಲ ಎಂಬುದು ಸಾಬೀತಾಗಿದೆ ಎಂದು ಮೆಲ್ವಿನ್ ಡಿಸೋಜ ಆರೋಪಿದ್ದಾರೆ.