ವಿವಾಹಿತ ಸಹೋದರಿಯರಿಬ್ಬರ ಸಂಶಯಾಸ್ಪದ ಸಾವು- ದೂರು ದಾಖಲು
ಸಕಲೇಶಪುರ ಜೂ.27: ವಿವಾಹಿತ ಸಹೋದರಿಯರಿಬ್ಬರು 17 ದಿನಗಳ ಅಂತರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಕಲೇಶಪುರದಲ್ಲಿ ನಡೆದಿದೆ.
ಸೌಂದರ್ಯ(21) ಮತ್ತು ಐಶ್ವರ್ಯ (19) ಮೃತಪಟ್ಟವರು. ಸಕಲೇಶಪುರ ದ ಬೆಳಗೊಡು ಗ್ರಾಮದ ಕಾಫಿ ತೋಟದ ಕಾರ್ಮಿಕ ಉದಯ ಎಂಬವರ ನಾಲ್ಕು ಮಕ್ಕಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಪೈಕಿ ಜೂ.8 ರಂದು ಎರಡನೇ ಮಗಳು ಐಶ್ವರ್ಯ ತುಮಕೂರಿನಲ್ಲಿ ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬಳಿಕ ಜೂ.25 ರಂದು ಹಿರಿಯ ಮಗಳು ಸೌಂದರ್ಯ ಹೊಸನಗರದ ತನ್ನ ಗಂಡನ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಶಂಕೆ ವ್ಯಕ್ತವಾಗಿದ್ದು ಮೃತರ ಪಾಲಕರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಐಶ್ವರ್ಯಳ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ಕೊಡುತ್ತಿದ್ದರು. ಐಶ್ವರ್ಯಳನ್ನು ಆಕೆಯ ಗಂಡನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತಳ ಪಾಲಕರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಇನ್ನು ಸೌಂದರ್ಯ ಕೂಡ ತನ್ನ ಗಂಡನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ಆತ್ಮಹತ್ಯೆ ಎಂಬಂತೆ ಬಿಂಬಿಸಿದ್ದಾರೆ ಎಂದು ಮೃತಳ ತಂದೆ ಉದಯ್ ಆರೋಪಿಸಿದ್ದಾರೆ. ಅಲ್ಲದೆ ಉಮೇಶ್ ನಿಗೆ ಬೇರೊಂದು ಮದುವೆ ಮಾಡಲು ಯೋಜನೆ ಮಾಡಿದ್ದರು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಹಿರಿಯ ಮಗಳು ಸೌಂದರ್ಯ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಓದುತ್ತಿದ್ದು, ಈ ಕಾರಣಕ್ಕಾಗಿಯೇ ಮದವೆಯಾಗಲು ನಿರಾಕರಿಸಿದ್ದರು ಎನ್ನಲಾಗಿದ್ದು, ಬಳಿಕ ಈಕೆಯ ತಂಗಿ ಐಶ್ವರ್ಯಾಗೆ ಕಳೆದ ವರ್ಷ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಾವೇರಿಪುರ ನಿವಾಸಿ ನಾಗರಾಜು ಎಂಬಾತನಿಗೆ ಮದುವೆ ಮಾಡಲಾಗಿತ್ತು. ನಾಗರಾಜು ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದು, ಅವರು ತುಮಕೂರು ನಗರದ ಸರಸ್ವತಿಪುರಂನಲ್ಲಿ ವಾಸವಾಗಿದ್ದರು. ಹಿರಿಯ ಮಗಳು ಸೌಂದರ್ಯ ಹೊಸನಗರ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಕಾಡಿಗ್ಗೇರಿ ನಿವಾಸಿ ಉಮೇಶ್ ಎಂಬಾತನನ್ನು ಕುಟುಂಬದ ಹಿರಿಯರ ವಿರೋಧದ ನಡುವೆ 2020ರ ನವೆಂಬರ್‌ನಲ್ಲಿ ಮದುವೆ ಆಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.