ಕೋವಿಡ್ ಲಸಿಕೆ ವಿತರಣೆ- ರಾಜ್ಯದಲ್ಲಿ ಉಡುಪಿಗೆ ಎರಡನೇ ಸ್ಥಾನ
ಉಡುಪಿ,ಜೂ.27(ಉಡುಪಿ ಟೈಮ್ಸ್ ವರದಿ): ಸ್ವಚ್ಚತೆ, ಶಿಕ್ಷಣ, ಹಡೀಲು ಭೂಮಿಯನ್ನು ಹಸನಾಗಿಸುವುದು ಹೀಗೆ ಅನೇಕ ವಿಚಾರಗಳಲ್ಲಿ ಉಡುಪಿ ಜಿಲ್ಲೆ ಮಾದರಿ ಜಿಲ್ಲೆಯಾಗಿ ಮೆರೆದಿದೆ. ಇದೀಗ ಕೊರೋನಾ ಲಸಿಕೀಕರಣ ವಿಚಾರದಲ್ಲೂ ಉಡುಪಿ ಮಾದರಿಯಾಗುತ್ತಿದೆ. ಕೋವಿಡ್ ನಿಯಂತ್ರಕ್ಕೆ ಒಂದೇ ಪರಿಹಾರವಾಗಿರುವ ಲಸಿಕೆ ವಿತರಣೆ ವಿಚಾರದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದ್ದೆ. ಈಗಾಗಲೇ ಜಿಲ್ಲೆಯ ಪಾಸಿಟಿವಿಟಿ ದರ ಗಣನೀಯವಾಗಿ ತಗ್ಗಿದ್ದು, 4.14 ಕ್ಕೆ ಇಳಿದಿದೆ. ಬೆಂಗಳೂರಿನ ಕರ್ನಾಟಕ ರಾಜ್ಯ ಕೋವಿಡ್ ವಾರ್ ರೂಮ್ ನಿನ್ನೆ ಬಿಡುಗಡೆಗೊಳಿಸಿದ ಜೂ.25 ರ ವರೆಗಿನ ಒಂದು ವಾರದ ರಾಜ್ಯ ಕೋವಿಡ್-19 ಅಂಕಿಅಂಶಗಳಲ್ಲಿ ರಾಜ್ಯದಲ್ಲಿ ಉಡುಪಿ ಜಿಲ್ಲೆ ಕೋವಿಡ್ ಲಸಿಕೀಕರಣದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಲಾಗಿದೆ.
ಈ ಪೈಕಿ ಬೆಂಗಳೂರು ನಗರ 58.99 ಶೇ. ದೊಂದಿಗೆ ಮೊದಲ ಸ್ಥಾನ ಪಡೆದುಕೊಂದರೆ ಉಡುಪಿ ಜಿಲ್ಲೆ 43.24 ಸ್ಥಾನದೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ರಾಮನಗರ ಜಿಲ್ಲೆ ಶೇ.40.81, ಮೈಸೂರು ಶೇ.39.96, ಕೋಲಾರ ಶೇ.39.40, ಕೊಡಗು ಶೇ.38.72 , ದಕ್ಷಿಣ ಕನ್ನಡ ಜಿಲ್ಲೆ ಶೇ.35.84, ಉತ್ತರ ಕನ್ನಡ ಜಿಲ್ಲೆ ಶೇ.35.33, ಶಿವಮೊಗ್ಗ ಶೇ.31.49 ಹಾಗೂ ಚಿಕ್ಕಮಗಳೂರು ಶೇ.32.99 ಸಾಧನೆ ಮಾಡಿವೆ. ಹಾವೇರಿ ಜಿಲ್ಲೆ ಶೇ.18.51, ಗುಲ್ಬರ್ಗ ಶೇ.18.79 ರಷ್ಟು ಸಾಧನೆ ಮಾಡಿದೆ.
ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿನ ಪ್ರಕರಣಗಳು ಮಿತಿ ಮೀರಿ ಹೆಚ್ಚಾದ ಸಮಯದಲ್ಲಿ ಶೇ.80 ರಷ್ಟಿದ್ದ ಸೋಂಕಿತರ ಪ್ರಮಾಣ ಜೂ.25ರ ವೇಳೆಗೆ ಶೇ. 97.36ಕ್ಕೇರಿದೆ. ಅಲ್ಲದೆ ಸೋಂಕಿತರ ಪ್ರಮಾಣದಲ್ಲಿ ಇಳಿಮುಖ ಕಂಡಿದ್ದು, ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 1,598 ಮಂದಿ ಸೋಂಕಿತರಿದ್ದರೆ ನಗರದ ಭಾಗಗಳಲ್ಲಿ 376 ಮಂದಿ ಮಾತ್ರ ಕಂಡುಬಂದಿದ್ದಾರೆ ಎಂದು ಅಂಕಿಅಂಶದಲ್ಲಿ ತಿಳಿಸಲಾಗಿದೆ.
ಇನ್ನು ಜಿಲ್ಲೆಯ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು, ಜಿಲ್ಲೆಯ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಯಾಗಿದೆ ಎಂದು ಸುಮ್ಮನಿರುವಂತಿಲ್ಲ. ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಇನ್ನಷ್ಟು ಕಡಿಮೆಗೊಳ್ಳಬೇಕು. ಇದಕ್ಕಾಗಿ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸಬೇಕು. ಹಾಗೂ ಪಾಸಿಟಿವಿಟಿ ಪ್ರಮಾಣ ಶೇ.2ಕ್ಕಿಂತ ಕೆಳಗಿಳಿಸುವ ಗುರಿ ಹೊಂದಿರ ಬೇಕು ಎಂದು ತಿಳಿಸಿದ್ದಾರೆ.