ಡೆಲ್ಟಾ ಪ್ಲಸ್ ಉಲ್ಬಣ: ರಾಜ್ಯದಲ್ಲಿ ಅವಸರದ ಅನ್ ಲಾಕ್ ಬೇಡ- ಸಲಹಾ ಸಮಿತಿ ಸೂಚನೆ
ಬೆಂಗಳೂರು: ಕೋವಿಡ್ ಡೆಲ್ಟಾ-ಪ್ಲಸ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಮತ್ತು ಮಹಾರಾಷ್ಟ್ರ ಅನ್ ಲಾಕ್ ನಿಂದಾಗಿ ರಾಜ್ಯದಲ್ಲಿ ಮತ್ತೆ ನಿಧಾನವಾಗಿ ಪರಿಸ್ಥಿತಿ ಗಂಭೀರವಾಗುತ್ತಿದ್ದು ಈ ನಿಟ್ಟಿನಲ್ಲಿ ಕರ್ನಾಟಕದ ತಾಂತ್ರಿಕ ಸಲಹಾ ಸಮಿತಿ(ಟಿಎಸಿ)ರಾಜ್ಯ ಸರ್ಕಾರ ತಕ್ಷಣ ತೆಗೆದುಕೊಳ್ಳಬೇಕಾದ ಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಅಲ್ಲದೆ ಅವಸರದಲ್ಲಿ ಲಾಕ್ ಡೌನ್ ಮಾನದಂಡಗಳನ್ನು ಸಡಿಲಿಸುವುದು ಬೇಡ ಎಂದು ಸರ್ಕಾರಕ್ಕೆ ಸೂಚಿಸಿದೆ.
ಡೆಲ್ಟಾ-ಪ್ಲಸ್‌ನ ಎರಡು ಪ್ರಕರಣಗಳು ರಾಜ್ಯದಲ್ಲಿ ಕಾಣಿಸಿದ್ದು ರಾಜ್ಯಕ್ಕೆ ಕೇಂದ್ರ ಕೂಡ ಜಾಗೃತವಾಗಿರುವುದಕ್ಕೆ ಒತ್ತಾಯಿಸಿದೆ. ತಕ್ಷಣದ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಬೇಕು, ಜನಸಂದಣಿಯನ್ನು ತಡೆಯಬೇಕು, ವ್ಯಾಪಕ ಪರೀಕ್ಷೆ ನಡೆಸಬೇಕು ಮತ್ತು ರೂಪಾಂತರ ಪತ್ತೆಯಾದ ಜಿಲ್ಲೆಗಳಲ್ಲಿ ಆದ್ಯತೆಯ ಮೇಲೆ ಲಸಿಕೆ ಹೆಚ್ಚಿಸಬೇಕು ಎಂದು ಕೇಂದ್ರ ಸೂಚಿಸಿದೆ.
ಡೆಲ್ಟಾ-ಪ್ಲಸ್ ಗಾಗಿ ಕ್ರಮಗಳ ಕುರಿತು ಚರ್ಚಿಸಲು ಶನಿವಾರ ಸಭೆ ನಡೆಸಿದ ಸಲಹಾ ಸಮಿತಿ, ಜಿಲ್ಲೆಗಳಲ್ಲಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. “ರೂಪಾಂತರ ದೃಢವಾದ ನಂತರ, ಜಿಲ್ಲಾ ಕಣ್ಗಾವಲು ಅಧಿಕಾರಿ (ಡಿಎಸ್‌ಒ) ಅಡಿಯಲ್ಲಿ ಜಿಲ್ಲಾ ಕ್ಷಿಪ್ರ ಪ್ರತಿಕ್ರಿಯೆ ತಂಡ (ಆರ್‌ಆರ್‌ಟಿ)ದಿಂದ ವಿವರವಾದ ಸಾಂಕ್ರಾಮಿಕ ರೋಗಶಾಸ್ತ್ರೀಯ ತನಿಖೆ ನಡೆಸ ಲಾಗುವುದು ಮತ್ತು ವರದಿಗಳನ್ನು ಜಿಲ್ಲಾಧಿಕಾರಿ, ಜಿಲ್ಲಾ ತಜ್ಞರ ಸಮಿತಿ ಮತ್ತು ರಾಜ್ಯ ಕೋವಿಡ್ ವಾರ್ ರೂಮಿನೊಂದಿಗೆ ಹಂಚಿಕೊಳ್ಳಬೇಕೆಂದು ಟಿಎಸಿ ಸೂಚಿಸಿದೆ.
ಮಾದರಿಗಳನ್ನು ಜೀನೋಮ್ ಗೆ ಅನುಕ್ರಮಗೊಳಿಸಲು ಒಂದರಿಂದ ಎರಡು ವಾರಗಳು ಬೇಕೆನ್ನುವುದನ್ನು ನೆನಪಿನಲ್ಲಿಟ್ಟು ಕೊಂಡು, ಟಿಎಸಿ ಆರ್ ಆರ್ ಟಿ ಗಳಿಗೆ “ಕೋವಿಡ್-ಪಾಸಿಟಿವ್ ವ್ಯಕ್ತಿಯ ವೈದ್ಯಕೀಯ ಸ್ಥಿತಿ, ಅವನು/ಅವಳು ಹೋಂ ಐಸೋಲೇಷನ್ ಅಡಿಯಲ್ಲಿ ಚೇತರಿಸಿಕೊಂಡಿದ್ದಾನೋ ಅಥವಾ ಮರಣಹೊಂದಿದ್ದಾನೋ ಇತ್ಯಾದಿಗಳನ್ನು ತನಿಖೆ ಮಾಡಲು ಸಲಹೆ ನೀಡಿದೆ. ಅಲ್ಲದೆ, ಚೇತರಿಕೆಯ 14 ದಿನಗಳ ಬಳಿಕ ಅಂತಹ ಜನರಿಗೆ ಕೋವಿಡ್- ನೆಗೆಟಿವ್ ಪರೀಕ್ಷೆಅಗತ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಟಿಎಸಿ ಸಲಹೆ ಕೊಟ್ಟಿದೆ. ರೂಪಾಂತರಕ್ಕೆ ಪಾಸಿಟಿವ್ ಆಗಿ ವರದಿ ಪಡೆದ ವ್ಯಕ್ತಿಯ ಎಲ್ಲಾ ಸಂಪರ್ಕಗಳನ್ನು ಗುರುತಿಸಲಾಗಿದೆಯೇ ಮತ್ತು ಏಳು ದಿನಗಳ ಕಾಲಪರೀಕ್ಷಿಸಲಾಗಿದೆಯೇ ಎಂದು ತಂಡಗಳು ಪರಿಶೀಲಿಸುವ ನಿರೀಕ್ಷೆಯಿದೆ.
ಸಂಪರ್ಕ ಪತ್ತೆಹಚ್ಚುವಿಕೆಯನ್ನು ಮಾಡಬೇಕು ಮತ್ತು ಅಂತಹ ಎಲ್ಲಾ ರೋಗಿಗಳ ಸಂಪರ್ಕಗಳಲ್ಲಿ ಆರ್‌ಟಿ-ಪಿಸಿಆರ್ ನಡೆಸಬೇಕು. ಪಾಸಿಟಿವ್ ವರದಿ ಬಂದರೆ ಅವುಗಳ ಮಾದರಿಗಳನ್ನು ಜೀನೋಮ್ ಅನುಕ್ರ್ಮಕ್ಕೆ ಒಳಪಡಿಸಬೇಕು. ಟಿಎಸಿ ಸದಸ್ಯರು ಸೂಕ್ಷ್ಮ ಯೋಜನೆ ಮತ್ತು ವರದಿ ಸ್ವರೂಪಗಳನ್ನು ರಾಜ್ಯ ಮಟ್ಟದಲ್ಲಿ ಕಟ್ಟುನಿಟ್ಟಾಗಿ ಮಾಡುವ ಅಗತ್ಯವನ್ನು ಒತ್ತಿಹೇಳಿದ್ದು ಕಟ್ಟು ನಿಟ್ಟಾದ ಕ್ವಾರಂಟೈನ್ ಪ್ರೋಟೋಕಾಲ್‌ಗಳನ್ನು ಜಾರಿಗೆ ತರಬೇಕು ಎಂದು ಅವರು ಹೇಳಿದರು.
ಸಮುದಾಯದಲ್ಲಿ ಇನ್ಫ್ಲುಎಂಜ ತರಹದ ಅನಾರೋಗ್ಯ (ಐಎಲ್ಐ) ಸಮೀಕ್ಷೆ – ಗ್ರಾಮೀಣ ಪ್ರದೇಶಗಳಲ್ಲಿ ಸಂಪೂರ್ಣ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿತುರ್ತಾಗಿ ಮಾಡಬೇಕು ಎಂದು ಟಿಎಸಿ ತಿಳಿಸಿದೆ. ಎಲ್ಲಾ ಐಎಲ್ಐ ಪ್ರಕರಣಗಳನ್ನು ಆರ್‌ಟಿಪಿಸಿಆರ್‌ನೊಂದಿಗೆ ಪರೀಕ್ಷಿಸಬೇಕು. “ಏಕಕಾಲೀನ ಜೀನೋಮಿಕ್ ಸೀಕ್ವೆನ್ಸಿಂಗ್ ಜೊತೆಗೆ ಕ್ಲಸ್ಟರ್ ಪ್ರಕರಣಗಳ ಸಾಂಕ್ರಾಮಿಕ ರೋಗಶಾಸ್ತ್ರೀಯ ತನಿಖೆಯನ್ನು ರಾಜ್ಯವು ಹೆಚ್ಚಿಸಬೇಕಾಗಿದೆ.
ಪ್ರತಿ ಜಿಲ್ಲೆಯ ಕ್ಷಿಪ್ರ ಪ್ರತಿಕ್ರಿಯೆ ತಂಡಗಳು ರೂಪಾಂತರಗಳಿಗಾಗಿ ಸಾಂಕ್ರಾಮಿಕ ರೋಗಗಳ ಕಣ್ಗಾವಲು ಬಲಪಡಿಸುವ ಇತ್ತೀಚಿನ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಟಿಎಸಿ ಸದಸ್ಯ ಡಾ.ಗಿರಿಧರ ಆರ್ ಬಾಬು ಹೇಳಿದರು. ಜಯದೇವ ಇನ್ಸ್ಟಿಟ್ಯೂಟ್ ಆಫ್ ಹೃದಯ ಸಂಬಂಧಿ ಕಾಯಿಲೆಗಳ ನಿರ್ದೇಶಕ ಡಾ.ಮಂಜುನಾಥ್ ಸಿ ಎನ್, ದೊಡ್ಡ ಪಾರ್ಟಿ, ಸಮಾರಂಭಗಳಿಗೆ ಗೆ ಅವಕಾಶ ನೀಡುವ ಯಾವುದೇ ನಿರ್ಧಾರವನ್ನು ಮುಂದೂಡಬೇಕೆಂದು ಸರ್ಕಾರವನ್ನು ಕೇಳಿದರು. ಹಿಂದಿನ ಅಲೆಗಳಲ್ಲಿ, ಮಹಾರಾಷ್ಟ್ರ, ಕೇರಳ ಮತ್ತು ದೆಹಲಿಯಲ್ಲಿ ಕಾಣಿಸಿಕೊಂಡ 2-4 ವಾರಗಳ ನಂತರ ಕರ್ನಾಟಕದಲ್ಲಿ ಸಾಂಕ್ರಾಮಿಕ ಉಲ್ಬಣ ಕಾಣಿಸಿದೆ ಎಂದು ಅವರು ಹೇಳಿದರು. ವಿಒಸಿಳನ್ನು ಮೊದಲೇ ಕಂಡುಹಿಡಿಯಲು ಜೀನೋಮ್ ಅನುಸರಣೆ ಯನ್ನು 5% ಮಾದರಿಗಳಿಂದ ಕನಿಷ್ಠ 20% ಕ್ಕೆ ಹೆಚ್ಚಿಸಬೇಕು ಎಂದು ಅವರು ಸಲಹೆ ನೀಡಿದರು. ಹೊರರಾಜ್ಯಗಳಿಂದ ಆಗಮಿಸುವ ವರಿಗೆ ಪರೀಕ್ಷೆಯನ್ನು ಕಡ್ಡಾಯಗೊಳಿಸಬೇಕು ಎಂದರು.
ರಾಜ್ಯವು 1 ದಿನದಲ್ಲಿ 4 ಸಾವಿರ ಪ್ರಕರಣಗಳನ್ನು ದಾಖಲಿಸಿದ್ದು ಜನರು ಕೋವಿಡ್ ನಿಯಮಗಳನ್ನು ಮೀರುತ್ತಿದ್ದಾರೆ ಎಂಬ ಸ್ಪಷ್ಟ ಸೂಚನೆಯಂತೆ ಕಂಡುಬರುತ್ತಿದೆ.ಕರ್ನಾಟಕವು ಶುಕ್ರವಾರ ದಾಖಲಾದ ಪ್ರಕರಣಗಳಿಗಿಂತ ಸುಮಾರು 1,000 ಹೆಚ್ಚುವರಿ ಪ್ರಕರಣಗಳನ್ನು ವರದಿ ಮಾಡಿದೆ. ಹಿಂದಿನ ದಿನ 3,310 ಪ್ರಕರಣಗಳಿಗೆ ಹೋಲಿಸಿದರೆ ರಾಜ್ಯವು ಶನಿವಾರ 4,272 ಹೊಸ ಪ್ರಕರಣಗಳನ್ನು ದಾಖಲಿಸಿದೆ. ಆದಾಗ್ಯೂ, ಸಕಾರಾತ್ಮಕತೆಯ ಪ್ರಮಾಣವು ಶುಕ್ರವಾರ 8.43% ರಿಂದ ಶನಿವಾರ 8.40% ಕ್ಕೆ ಇಳಿದಿದೆ.
‘ರಾಜ್ಯ ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ’
ನೆಗೆಟಿವ್ ವರದಿ ಪಡೆಯದೆ ರಾಜ್ಯಕ್ಕೆ ಪ್ರವೇಶಿಸುವ ಜನರ ತಡೆಯಲು ಸರ್ಕಾರ ಚಿಂತಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಶನಿವಾರ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಡೆಲ್ಟಾ ಪ್ಲಸ್ರೂಪಾಂತರದ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಪರೀಕ್ಷೆ ಖಚಿತ ಪಡಿಸಿಕೊಳ್ಳಲು ತಮ್ಮ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.