ಕೊಡವೂರು: ಕಲ್ಮತ್ ಮಸೀದಿ ಜಾಗ ಮರಳಿ ಸರಕಾರದ ವಶಕ್ಕೆ- ಹಿಂದೂ ಯುವಸೇನೆ ಹರ್ಷ
ಉಡುಪಿ ಜೂ.25(ಉಡುಪಿ ಟೈಮ್ಸ್ ವರದಿ): ಕೊಡವೂರಿನ ಕಲ್ಮತ್ ಮಸೀದಿಗೆ ಮಂಜೂರಾದ ಸರಕಾರದ ಜಾಗವನ್ನು ಮರಳಿ ಸರಕಾರದ ವಶಕ್ಕೆ ಪಡೆದಿರುವುದಕ್ಕೆ ಹಿಂದೂ ಯುವಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಮಂಜು ಕೊಳ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು ಸರಕಾರಿ ಜಮೀನನ್ನು ಮತ್ತೆ ಸರಕಾರದ ವಶಕ್ಕೆ ಪಡೆಯುವಲ್ಲಿ ಸಹಕರಿಸಿದ ಉಡುಪಿ ಶಾಸಕ ರಘುಪತಿ ಭಟ್, ಉಸ್ತುವಾರಿ ಸಚುವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ಯಾರಾದರೂ ಕಾನೂನು ರೀತಿಯ ಹೋರಾಟ ಮಾಡುವುದಾದರೇ ನಾವೂ ಕೂಡಾ ಕಾನೂನು ಹೋರಾಟಕ್ಕೆ ಸಿದ್ದರಿದ್ದೇವೆ ಎಂದು ಅವರು ತಿಳಿಸಿದ್ದಾರೆ.
2018 ರಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಉಡುಪಿ ತಾಲ್ಲೂಕಿನ ಕೊಡವೂರು ಗ್ರಾಮದ ಸರ್ವೆ ನಂ 53/6 ರಲ್ಲಿ 0.67 ಸೆಂಟ್ಸ್ ಜಾಗವನ್ನು ವಕ್ಫ್ ಬೋರ್ಡ್ ಮುಖೇನ ಕಲ್ಮತ್ ಮಸೀದಿ, ಪಳ್ಳಿ ಜಿಡ್ಡ, ಕೊಡವೂರು ಇವರ ಹೆಸರಿಗೆ ಮಂಜೂರು ಮಾಡಿ ಗಜೆಟೆಡ್ ನೋಟಿಫಿಕೇಶನ್ ಹೊರಡಿಸಿದ್ದರು.
ಈ ಬಗ್ಗೆ ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಸಕ ಕೆ ರಘುಪತಿ ಭಟ್ ಅವರು ಕಂದಾಯ ಸಚಿವರಾದ ಆರ್ ಅಶೋಕ್ ಅವರನ್ನು ಭೇಟಿಯಾಗಿ ಸ್ಥಳೀಯ ಸ್ಥಿತಿಗತಿಯನ್ನು ಮನವರಿಕೆ ಮಾಡಿ ಈ ಜಾಗವನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಲಾಗಿದ್ದು, ಅದನ್ನು ಮರಳಿ ಸರಕಾರದ ವಶಕ್ಕೆ ಪಡೆಯುವಂತೆ ಮನವಿ ಮಾಡಿದ್ದರು. ಅದರಂತೆ ಕಂದಾಯ ಸಚಿವರ ಸೂಚನೆ ಮೇರೆಗೆ ಉಡುಪಿ ಜಿಲ್ಲಾಧಿಕಾರಿಯವರು ಸ್ಥಳೀಯ ಸ್ಥಿತಿಗತಿಗಳ ವರದಿಯನ್ನು ಸಲ್ಲಿಸಿರುವಂತೆ ಈ ಜಾಗವನ್ನು ಮರಳಿ ಸರಕಾರದ ವಶಕ್ಕೆ ನೀಡಿ ಜೂ.22 ರಂದು ಅಧಿಸೂಚನೆ ಹೊರಡಿಸಿದ್ದಾರೆ.