ಮುಂಬೈ ಜೂ.25: ದೇಶದಲ್ಲಿ ಜಿಯೋ ವತಿಯಿಂದ ಶೀಘ್ರದಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಪರಿಚಯವಾಗಲಿದೆ. ಈ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್‍ನ 44ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಮಾಹಿತಿ ನೀಡಿದ್ದು, ‘ಜಿಯೋಫೋನ್ ನೆಕ್ಸ್ಟ್’ ಎಂಬ ಹೆಸರಿನ ಆಂಡ್ರಾಯ್ಡ್ ಸ್ಮಾರ್ಟ್ ಫೋನನ್ನು ಜಿಯೋ ಹಾಗೂ ಗೂಗಲ್ ತಂಡಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಸೆಪ್ಟೆಂಬರ್ 10ರ ಗಣೇಶ ಚತುರ್ಥಿಯ ದಿನದಿಂದ ಈ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಈ ಫೋನ್ ಭಾರತದಲ್ಲಿ ಮಾತ್ರವೇ ಅಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಆಗಿರಲಿದೆ ಎಂದಿರುವ ಅವರು, ಈ ಸ್ಮಾರ್ಟ್ ಫೋನ್ ನಲ್ಲಿ ವಾಯ್ಸ್ ಅಸಿಸ್ಟೆಂಟ್, ಪರದೆಯ ಮೇಲಿನ ಪಠ್ಯವನ್ನು ಓದಿ ಹೇಳುವ ಸೌಲಭ್ಯ, ಅನುವಾದ ಸೌಲಭ್ಯ, ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್ ಗಳಿರುವ ಸ್ಮಾರ್ಟ್ ಕ್ಯಾಮೆರಾ ಇರಲಿದೆ. ಗೂಗಲ್ ಹಾಗೂ ಜಿಯೋ ಅಪ್ಲಿಕೇಶನ್ ಅಲ್ಲದೆ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿರುವ ಆಪ್ ಗಳನ್ನು ಬಳಸಬಹುದಾಗಿದೆ. ಅಲ್ಲದೆ ಇತರ ಕಡಿಮೆ ಬೆಲೆಯ ಫೋನಿನಲ್ಲಿ ಇರದ ಫಾಸ್ಟ್ ಹೈ ಕ್ವಾಲಿಟಿ ಕ್ಯಾಮೆರಾ ವ್ಯವಸ್ಥೆ ಗೂಗಲ್ ಈ ಫೋನಿಗೆ ನೀಡುವುದಾಗಿ ಹೇಳಿದೆ. ಇದರೊಂದಿಗೆ ಎಚ್‍ಡಿಆರ್ ಮೋಡ್ ಇರಲಿದೆ ಎಂದು ತಿಳಿಸಿದ್ದಾರೆ.
ಗೂಗಲ್ ಸ್ನಾಪ್‍ಚಾಟ್ ಜೊತೆಗೂಡಿ ಹೊಸ ಲೆನ್ಸ್ ಅಭಿವೃದ್ಧಿ ಪಡಿಸಿದೆ. ಹೀಗಾಗಿ ಉತ್ತಮ ಗುಣಮಟ್ಟದ ಕ್ಯಾಮೆರಾ ಇರುವ ಸಾಧ್ಯತೆಯಿದೆ. ಹಾಗೂ ಗೂಗಲ್ ಈ ಜಿಯೋ ಫೋನಿಗೆ ಲೇಟೆಸ್ಟ್ ಆಂಡ್ರಾಯ್ಡ್ ಓಎಸ್ ಭದ್ರತಾ ನವೀಕರಣಗಳನ್ನು ನೀಡುವುದಾಗಿ ಭರವಸೆ ನೀಡಿದೆ. ಆದರೆ ಯಾವ ಆಂಡ್ರಾಯ್ ಆವೃತ್ತಿ ಇರಲಿದೆ ಎನ್ನುವುದು ಸಷ್ಟವಾಗಿ ತಿಳಿದು ಬಂದಿಲ್ಲ. ಇನ್ನು ಈ ಸ್ಮಾರ್ಟ್ ಜೀಯೋ ಫೋನ್ ಬೆಲೆ ಎಷ್ಟು ಎನ್ನುವುದನ್ನು ತಿಳಿಸಿಲ್ಲ ಆದರೆ ಕಡಿಮೆ ಬೆಲೆ ಎಂಬ ಸುಳಿವು ನೀಡಿದ ಹಿನ್ನೆಲೆಯಲ್ಲಿ 5 ಸಾವಿರ ರೂ. ಒಳಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್‍ಬಿಲ್ಟ್ ಜಿಯೋ ಸಿಮ್ ಇರುವ ಕಾರಣ ಈ ಫೋನ್ ಬಳಕೆದಾರರಿಗೆ ಜಿಯೋ ವಿಶೇಷ ಡೇಟಾ ಪ್ಲ್ಯಾನ್ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದೂ ಹೇಳಲಾಗುತ್ತಿದೆ.
ಜಿಯೋದಲ್ಲಿ ಈಗಾಗಲೇ ಗೂಗಲ್, ಫೇಸ್‍ಬುಕ್ ಅಲ್ಲದೇ ಚಿಪ್ ತಯಾರಕ ಕಂಪನಿಗಳಾದ ಕ್ವಾಲಕಂ ಮತ್ತು ಇಂಟೆಲ್ ಹೂಡಿಕೆ ಮಾಡಿದೆ. ಹೀಗಾಗಿ ಹಾರ್ಡ್‍ವೇರ್ ವಿಚಾರದಲ್ಲಿ ಫೋನ್ ತಯಾರಿಕೆಗೆ ಈ ಹೂಡಿಕೆ ನೆರವಾಗಬಹುದು. ಆಪರೇಟಿಂಗ್ ಸಿಸ್ಟಂ ವಿಚಾರದಲ್ಲಿ ಗೂಗಲ್ ಹೇಗೂ ಸಹಾಯ ಮಾಡುತ್ತದೆ ಎಂದು ಈಗಾಗಲೇ ಹೇಳಿದೆ. ಈ ಹಿಂದೆ 3ಜಿ ಮತ್ತು 4ಜಿ ಮಾನದಂಡವನ್ನು ನಿರ್ಧರಿಸುವ ಸಂದರ್ಭದಲ್ಲಿ ಭಾರತ ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಂಡಿತ್ತು. ಹೀಗಾಗಿ ವಿಶ್ವದಲ್ಲಿ 4ಜಿ ಬಳಕೆ ಆರಂಭಗೊಂಡಿದ್ದರೂ ಭಾರತದ ಹಲವು ನಗರಗಳಲ್ಲಿ 3ಜಿ, ಗ್ರಾಮೀಣ ಭಾಗದಲ್ಲಿ 2ಜಿ ನೆಟ್‍ವರ್ಕ್ ಬಳಕೆ ಇತ್ತು. ದೇಶದಲ್ಲಿ 4ಜಿ ತಡವಾಗಿ ಬರಬಹುದು ಎಂಬ ಕಾರಣಕ್ಕೆ ಭಾರತದ ಫೋನ್ ಕಂಪನಿಗಳು 3ಜಿ ಫೋನ್‍ಗಳತ್ತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ್ದವು. 2016ರಲ್ಲಿ ಜಿಯೋ ಅಧಿಕೃತವಾಗಿ ಆರಂಭಗೊಂಡು 4ಜಿ ಸೇವೆ ಬಿಡುಗಡೆ ಮಾಡಿ ಸ್ಮಾರ್ಟ್‍ಫೋನ್ ಮತ್ತು ಟೆಲಿಕಾಂ ಮಾರುಕಟ್ಟೆಯನ್ನು ಅಲುಗಾಡಿಸಿತ್ತು. ಇದರಿಂದಾಗಿ 4ಜಿ ಸ್ಮಾರ್ಟ್‍ಫೋನ್ ತಯಾರಿಸುತ್ತಿದ್ದ ವಿಶ್ವದ ಹಲವು ಕಂಪನಿಗಳಿಗೆ ನೆರವಾಗಿದ್ದರೆ ಭಾರತದ ಫೋನ್‍ಗಳು ಸ್ಪರ್ಧಿಸಲಾಗದೇ ರೇಸ್‍ನಿಂದಲೇ ಹೊರಬಿದ್ದಿತ್ತು. | | |