ಶೇ.25 ರಷ್ಟು ಪ್ರಯಾಣ ದರ ಹೆಚ್ಚಳದೊಂದಿಗೆ ಖಾಸಗಿ ಬಸ್ ಸೇವೆ ಜು.1 ರಿಂದ ಪ್ರಾರಂಭ
ಉಡುಪಿ ಜೂ.25: ಜಿಲ್ಲೆಯಲ್ಲಿ ಜು.1 ರಿಂದ ಬಸ್ ಸೇವೆ ಆರಂಭವಾಗುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಕೆಲಸ ಕಾರ್ಯಗಳಿಗೆ ತೆರಳುವ ನೌಕರರಿಗೆ ಖುಷಿ ಕೊಟ್ಟಿದೆ.
ಆದರೆ ಈ ಇದೀಗ ಖಾಸಗಿ ಬಸ್ ಗಳು ಸೇವೆ ಆರಂಭಿಸುವ ಜೊತೆಗೆ ಪ್ರಯಾಣ ದರವನ್ನು ಶೇ.25 ರಷ್ಟು ಹೆಚ್ಚಿಸಿರುವುದು ತಿಳಿದು ಬಂದಿದೆ. ಮೊದಲೇ ಕೆಲಸ ಇಲ್ಲದೆ ಸಂಕಷ್ಟದಲ್ಲಿದ್ದ ಸಾರ್ವಜನಿಕ ರು ಬಸ್ ಆರಂಭವಾಗುವುದರ ಮೂಲಕ ಮತ್ತೆ ಕೆಲಸ ಕಾರ್ಯಗಳಲ್ಲಿ ತೊಡಗಿ ಕೊಳ್ಳಬಹುದು ಎಂಬ ಖುಷಿ ಪಟ್ಟಿದ್ದರು. ಆದರೆ ಇದೀಗ ಬೆಲೆ ಏರಿಕೆಯು ಸಾರ್ವಜನಿಕರಿಗೆ ಮತ್ತೊಂದು ಸಂಕಷ್ಟ ಎದುರಾದಂತಿದೆ.
ಇನ್ನು ಬಸ್ ದರ ಏರಿಕೆ ಕುರಿತಂತೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಖಾಸಗಿ ಬಸ್ ಮಾಲೀಕರ ಸಂಘದ ಕುಯಿಲಾಡಿ ಸುರೇಶ್ ನಾಯಕ್ ಅವರು, ಪ್ರಸಕ್ತ ಡೀಸೆಲ್ ದರ ಏರಿಕೆ, ಶೇ.50 ಆಸನ ಭರ್ತಿ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಹೊರಡಿಸಿದ ನೊಟಿಫಿಕೇಶನ್ ಪ್ರಕಾರ ಸೆಸ್ ವಿಧಿಸಲು ಅವಕಾಶವಿದೆ. ಅದರಂತೆ ಶೇ.25 ಟಿಕೆಟ್ ದರ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ಶಾಸಕರು, ಅಧಿಕಾರಿಗಳು, ಖಾಸಗಿ ಬಸ್ ಮಾಲೀಕರ ಸಭೆಯಲ್ಲಿ ಜುಲೈ 1 ರಿಂದ ಬಸ್ ಓಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಅದರಂತೆ ಜಿಲ್ಲೆಯಲ್ಲಿ ಕೋವಿಡ್-19 ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಸಿಟಿ ಹಾಗೂ ಸರ್ವೀಸ್ ಖಾಸಗಿ ಬಸ್‌ಗಳು ಸಂಚಾರ ಜುಲೈ 1 ರಿಂದ ಹಂತಹಂತವಾಗಿ ರಸ್ತೆಗಿಳಿಯಲಿವೆ.