ಮೈಕ್ರೊ ಫೈನಾನ್ಸ್ ಸಾಲ ಮನ್ನಾಕ್ಕೆ ಜನವಾದಿ ಮಹಿಳಾ ಸಂಘಟನೆ ಆಗ್ರಹ
ಕುಂದಾಪುರ: ಸ್ತ್ರೀ ಶಕ್ತಿ, ಸ್ವ ಸಹಾಯ ಸಂಘಗಳು, ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಬ್ಯಾಂಕ್‌ಗಳು, ಸಂಘಗಳು ಹಾಗೂ ಕಿರುಸಾಲ(ಮೈಕ್ರೊಫೈನಾನ್ಸ್ ) ಸಂಸ್ಥೆಗಳಿಂದ ಪಡೆದ ಸಾಲ ಹಾಗೂ ಬಡ್ಡಿ ಮನ್ನಾಕ್ಕೆ ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸದಸ್ಯರು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
‘ರಾಜ್ಯದಲ್ಲಿ ಮೈಕ್ರೊಫೈನಾನ್ಸ್ ಸಂಸ್ಥೆಗಳಲ್ಲಿ 35 ರಿಂದ 40 ಲಕ್ಷ ಮಹಿಳೆಯರು ಸದಸ್ಯರಾಗಿ ಸ್ವಯಂ ಉದ್ಯೋಗ, ಕೃಷಿ ಚಟುವಟಿಕೆ, ಮಕ್ಕಳ ವಿದ್ಯಾಭ್ಯಾಸ , ಕುಟುಂಬ ಆರೋಗ್ಯ, ಕುಟುಂಬ ನಿರ್ವಹಣೆಯೂ ಸೇರಿದಂತೆ ತಮ್ಮ ಖರ್ಚು ವೆಚ್ಚಗಳಿಗಾಗಿ ಸಾಲ ಪಡೆದಿದ್ದಾರೆ. ಕೋವಿಡ್ ಲಾಕ್‌ಡೌನ್ ಕಾರಣದಿಂದ ಎಲ್ಲ ಕ್ಷೇತ್ರಗಳಂತೆ ಈ ಮಹಿಳೆಯರು ಸಂಕಷ್ಟದಲ್ಲಿದ್ದಾರೆ . ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಇವರು ಪಡೆದ ಸಾಲಕ್ಕೆ ಶೇ 18 ರಿಂದ 24 ವರೆಗೆ ಚಕ್ರಬಡ್ಡಿ ಹಾಕುತ್ತಾರೆ. ಕಂತು ಪಾವತಿಸಲು ಪೀಡಿಸುತ್ತಿದ್ದಾರೆ. ಇದು ಶೋಷಣೆಯ ಪರಮಾವಧಿ. ಸರ್ಕಾರ ಮಹಿಳೆಯರ ಸಾಲ ಮತ್ತು ಬಡ್ಡಿ ಮನ್ನಾ ಮಾಡಲು ಕೂಡಲೇ ಹಣಕಾಸಿನ ನೆರವನ್ನು ಬಿಡುಗಡೆ ಮಾಡಬೇಕು’ ಎಂದು ಪ್ರತಿಭಟನಕಾರರು ಮುಖ್ಯಮಂತ್ರಿಗೆ ರವಾನಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಸಾಲ ವಸೂಲಾತಿಗೆ ಒತ್ತಡ ಹಾಕದಂತೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ ಆದೇಶದ ಉಲ್ಲಂಘನೆಯಾಗುತ್ತಿದೆ. ಕೋವಿಡ್ ಪರಿಹಾರವೆಂದು ಪ್ರಧಾನ ಮಂತ್ರಿ ಘೋಷಿಸಿದ ₹20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ನೈಜ ಪರಿಹಾರದ ಪಾಲು ಕನಿಷ್ಠವಾಗಿದೆ ಎಂದು ಮಹಿಳಾ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಜನವಾದಿ ಮಹಿಳಾ ಸಂಘಟನೆಯ ತಾಲ್ಲೂಕು ಅಧ್ಯಕ್ಷೆ ಆರತಿ, ಕಾರ್ಯದರ್ಶಿ ಶೀಲಾವತಿ , ಬಲ್ಕೀಸ್, ನಾಗರತ್ನ ನಾಡ, ಸಿಐಟಿಯು ಸಂಘಟನೆಯ ಪ್ರಮುಖರಾದ ಎಚ್.ನರಸಿಂಹ, ಸುರೇಶ್ ಕಲ್ಲಾಗರ ಇದ್ದರು.