| ಮಂಗಳೂರು ಜೂ.24 (ಉಡುಪಿ ಟೈಮ್ಸ್ ವರದಿ): ದ.ಕ ಜಿಲ್ಲೆಯಲ್ಲಿ ಜು.1ರಿಂದ ಸಿಟಿ ಮತ್ತು ಸರ್ವಿಸ್ ಬಸ್ ಗಳು ಮತ್ತೆ ಸಂಚಾರ ಆರಂಭಿಸಲಿದೆ.
ಈ ಬಗ್ಗೆ ಕೆನರಾ ಬಸ್ ಮಾಲಕರ ಅಸೋಸಿಯೇಶನ್ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮತ್ತು ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಅವರು ಮಾಹಿತಿ ನೀಡಿದ್ದು, ಈಗಾಗಲೆ ಬಸ್ ಚಾಲಕರು, ನಿರ್ವಾಹಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಮಾಲಕರು ಕೂಡ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಇಂದು ವಿಸ್ತೃತ ಚರ್ಚೆ ನಡೆಸಿ, ಬಸ್ ಸಾರಿಗೆ ಉದ್ಯಮದ ಭವಿಷ್ಯದ ಹಿತದೃಷ್ಟಿಯಿಂದ ಜುಲೈ 1ರಿಂದ ಬಸ್ ಸಂಚಾರ ಆರಂಭಿಸಲು ಮುಂದಾಗಿದ್ದೇವೆ ಎಂದಿದ್ದಾರೆ.
ಇದೇ ವೇಳೆ ಸರಕಾರದ ಮಾರ್ಗಸೂಚಿಯನ್ನು ಯಥಾವತ್ತಾಗಿ ಪಾಲಿಸಲು ಸಾಧ್ಯವಿಲ್ಲ ಎಂದ ಅವರು, ಬಸ್ಸಿನಲ್ಲಿರುವ ಸೀಟಿನ ಅರ್ಧದಷ್ಟು ಪ್ರಯಾಣಿಕರನ್ನು ಕರೆದುಕೊಂಡು ಹೋದರೆ ನಮಗೆ ಯಾವುದೇ ಆದಾಯ ಲಭ್ಯವಾಗುವುದಿಲ್ಲ ಈಗಾಗಲೆ ಡೀಸೆಲ್ ಬೆಲೆ ಏರಿಕೆಯಾಗಿದೆ. ಆದರೆ ಪ್ರಯಾಣ ದರ ಹೆಚ್ಚಿಸುವಂತೆ ಕೇಳುವುದು ಕೂಡ ಸದ್ಯದ ಸ್ಥಿತಿಯಲ್ಲಿ ಸಮಂಜಸವಲ್ಲ. ನಾವು ಕೆಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದೆವು. ಸರಕಾರ ನಮ್ಮ ಯಾವ ಬೇಡಿಕೆಯನ್ನೂ ಈಡೇರಿಸಿಲ್ಲ ಎಂದು ತಿಳಿಸಿದ್ದಾರೆ. | |