ಉಡುಪಿ ಜೂ.24(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿರುವುದು ಕಂಡು ಬಂದಿದೆ. ಆದರೆ ಜಿಲ್ಲೆಯ ಜನತೆ ನಿರ್ಲಕ್ಷ್ಯ ಮಾಡದೆ ಕೋವಿಡ್ ಕುರಿತು ಜಾಗೃತರಾಗಿರುವುದು ತುಂಬಾ ಅಗತ್ಯವಾಗಿದೆ.
ಜಿಲ್ಲೆಯಲ್ಲಿ ಇಂದು 123 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಪೈಕಿ ಉಡುಪಿಯಲ್ಲಿ 45, ಕುಂದಾಪುರ 50, ಕಾರ್ಕಳ 24 ಹಾಗೂ ಹೊರ ಜಿಲ್ಲೆಯ 4 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ1330 ಕ್ಕೆ ಇಳಿಕೆಯಾಗಿದೆ.
ಇಂದು ಜಿಲ್ಲೆಯಲ್ಲಿ ಉಡುಪಿಯ ಮೂವರು ಮಹಿಳೆಯರು ಹಾಗೂ ಓರ್ವ ವ್ಯಕ್ತಿ, ಕುಂದಾಪುರದ ಓರ್ವ ವ್ಯಕ್ತಿ, ಕಾರ್ಕಳದ ಇಬ್ಬರು ಮಹಿಳೆಯರು ಸೇರಿ ಒಟ್ಟು 7 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಜೂ. 23 ರಂದು ಜಿಲ್ಲೆಯಲ್ಲಿ 209 ಮಂದಿ ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿ ಹೊರ ಬಂದಿದ್ದು, ಕೋವಿಡ್ 2ನೇ ಅಲೆ ಆರಂಭ ಆದಾಗಿನಿಂದ ಈವರೆಗೆ 40,673 ಮಂದಿ ಗುಣಮುಖರಾಗಿದ್ದಾರೆ. ಹಾಗೂ ಜಿಲ್ಲೆಯಲ್ಲಿ ಒಟ್ಟು ಈವರೆಗೆ ಪತ್ತೆಯಾದ 65,809 ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ 64,094 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಕೋವಿಡ್ 2ನೇ ಅಲೆಯಲ್ಲಿ ಜೂ.23 ರ ವೇಳೆಗೆ ಜಿಲ್ಲೆಯಲ್ಲಿ 2,99,997 ಮಂದಿಯನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿದ್ದು, ಈ ಪೈಕಿ 42,198 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ಈ ವರೆಗೆ 2ನೇ ಅಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 195 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ
ಇನ್ನು ಜಿಲ್ಲೆಯಲ್ಲಿ 4 ಬ್ಲಾಕ್ ಫಂಗಸ್ ಪ್ರಕರಣಗಳು ಸಕ್ರಿಯವಾಗಿದೆ. ಈ ವರೆಗೆ ಉಡುಪಿಯಲ್ಲಿ 4, ಕುಂದಾಪುರದಲ್ಲಿ 6 ಹಾಗೂ ಹೊರ ಜಿಲ್ಲೆಯ 18 ಮಂದಿಯಲ್ಲಿ ಈ ಕಪ್ಪು ಶಿಲೀಂಧ್ರ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ 22 ಮಂದಿ ಸೋಂಕಿ ನಿಂದ ಗುಣಮುಖರಾಗಿದ್ದು, ಇಬ್ಬರು ಬ್ಲಾಕ್ ಫಂಗಸ್ ಗೆ ಬಲಿಯಾಗಿದ್ದಾರೆ. ಒಟ್ಟು 28 ಬ್ಲಾಕ್ ಫಂಗಸ್ ನ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದೆ.
ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 3979 ಹೊಸ ಪ್ರಕರಣ ಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2823444ಕ್ಕೆ ಏರಿಕೆಯಾಗಿದೆ. 9768 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಗುಣಮುಖರಾದವರ ಒಟ್ಟು ಸಂಖ್ಯೆ 2678473ಕ್ಕೆ ಏರಿಕೆ ಯಾಗಿದೆ. ಸೋಂಕಿನಿಂದ ರಾಜ್ಯದಲ್ಲಿಂದು 138 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೇ ಮೃತರ ಸಂಖ್ಯೆ 34425ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸದ್ಯ 110523 ಸಕ್ರಿಯ ಪ್ರಕರಣಗಳಿವೆ.ಸೋಂಕಿನ ಪ್ರಮಾಣ ಶೇ.2.46 ರಷ್ಟಿದ್ದು, ಮರಣ ಪ್ರಮಾಣ ಶೇ.3.46 ರಷ್ಟಿದೆ. ಬೆಂಗಳೂರಿನಲ್ಲಿ 969 ಹೊಸ ಪ್ರಕರಣ ಪತ್ತೆಯಾಗಿದ್ದು,3176 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಾವಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದ್ದು, ಇಂದು 14 ಮಂದಿ ಸಾವನ್ನಪ್ಪಿದ್ದಾರೆ. | | |