ದುಬೈನಿಂದ ಬಂದವರಲ್ಲಿ ಯಾರೂ ಕ್ವಾರಂಟೈನ್‌ ತಪ್ಪಿಸಿಕೊಂಡಿಲ್ಲ: ಡಿಸಿ ಸ್ಪಷ್ಟನೆ

ಮಂಗಳೂರು: ಜೂನ್‌ 27ರಂದು ದುಬೈನಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದು ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದ 150 ಮಂದಿ ಕನ್ನಡಿಗರನ್ನು ಶಾಸಕ ಯು.ಟಿ. ಖಾದರ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಜಂಟಿ ಕಾರ್ಯಾಚರಣೆ ನಡೆಸಿ ಸೋಮವಾರ ಬೆಳಗೆ ನಗರಕ್ಕೆ ಕರೆತಂದಿದ್ದಾರೆ.

ದುಬೈನ ಕರ್ನಾಟಕ ಕಲ್ಚರಲ್‌ ಫೌಂಡೇಶನ್‌ ವ್ಯವಸ್ಥೆ ಮಾಡಿದ್ದ ಬಾಡಿಗೆ ವಿಮಾನದಲ್ಲಿ ಕಣ್ಣೂರಿಗೆ ಬಂದಿಳಿದ ಕನ್ನಡಿಗರನ್ನು ಕಾಸರಗೋಡು ನಗರದ ಮೂರು ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಸ್ಥಳೀಯರ ವಿರೋಧದ ಕಾರಣದಿಂದ ತಕ್ಷಣವೇ ಎಲ್ಲರನ್ನೂ ಹೊರಕ್ಕೆ ಕಳಿಸುವಂತೆ ಅಲ್ಲಿನ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಹೋಟೆಲ್‌ ಮಾಲೀಕರಿಗೆ ಸೂಚನೆ ನೀಡಿದ್ದರು. ಭಾನುವಾರ ಮಧ್ಯರಾತ್ರಿ ಎಲ್ಲರನ್ನೂ ಹೋಟೆಲ್‌ನಿಂದ ಹೊರಕ್ಕೆ ಕಳಿಸಲಾಗಿತ್ತು.

ಮಧ್ಯರಾತ್ರಿ ಅತಂತ್ರರಾದ ಜನರು ಶಾಸಕ ಖಾದರ್‌ ಅವರನ್ನು ಸಂಪರ್ಕಿಸಿ ನೆರವು ಯಾಚಿಸಿದ್ದರು. ಆದರೆ, ರಾಜ್ಯ ಪ್ರವೇಶಿಸಲು ಯಾರ ಬಳಿಯೂ ಪಾಸ್‌ ಇರಲಿಲ್ಲ. ಸೇವಾ ಸಿಂಧು ತಂತ್ರಾಂಶದಲ್ಲಿ ನೋಂದಣಿಯನ್ನೂ ಮಾಡಿರಲಿಲ್ಲ. ರಾತ್ರಿಯೇ ತಲಪಾಡಿ ಚೆಕ್‌ಪೋಸ್ಟ್‌ ಬಳಿ ತೆರಳಿದ ಖಾದರ್‌, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರನ್ನು ಸಂಪರ್ಕಿಸಿ ಪರಿಸ್ಥಿತಿ ವಿವರಿಸಿದ್ದರು. ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದವರನ್ನು ಕರೆತರಲು ಅನುಮತಿ ನೀಡುವಂತೆ ಕೋರಿದ್ದರು.

ಜಿಲ್ಲಾಧಿಕಾರಿ ಅನುಮತಿ ನೀಡಿದ ಬಳಿಕ, ಕಾಸರಗೋಡು ಜಿಲ್ಲೆಯ ಕೆಲವು ಮುಖಂಡರ ನೆರವು ಪಡೆದು ಎಲ್ಲರನ್ನೂ ಕಾಸರಗೋಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ಬಸ್‌ಗಳಲ್ಲಿ ಮಂಗಳೂರಿಗೆ ಕರೆತರಲಾಯಿತು. ಬೆಳಗ್ಗಿನ ಜಾವ ನಗರ ತಲುಪಿದವರನ್ನು ಮಂಗಳೂರಿನ ಮೂರು ಮತ್ತು ದೇರಳಕಟ್ಟೆಯ ಒಂದು ಹೋಟೆಲ್‌ನಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಕನ್ನಡಿಗರು ಬಂದು ಕಣ್ಣೂರಿನಲ್ಲಿ ಇಳಿದಿರುವ ಕುರಿತು ಕೇರಳ ಸರ್ಕಾರ ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ. ಬಳಿಕ ಕ್ವಾರಂಟೈನ್‌ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದ ಅಲ್ಲಿನ ಅಧಿಕಾರಿಗಳು, ನಂತರ ಖಾಲಿ ಮಾಡಿಸಿದ್ದರು. ಮಾನವೀಯ ನೆಲೆಯಲ್ಲಿ ಎಲ್ಲರನ್ನೂ ಕರೆತಂದು, ಕ್ವಾರಂಟೈನ್‌ ಮಾಡಲಾಗಿದೆ. ಜೂನ್‌ 27ರಂದು ಬಂದವರಲ್ಲಿ ಯಾರೂ ಕ್ವಾರಂಟೈನ್‌ ತಪ್ಪಿಸಿಕೊಂಡಿಲ್ಲ’ ಎಂದರು. 

1 thought on “ದುಬೈನಿಂದ ಬಂದವರಲ್ಲಿ ಯಾರೂ ಕ್ವಾರಂಟೈನ್‌ ತಪ್ಪಿಸಿಕೊಂಡಿಲ್ಲ: ಡಿಸಿ ಸ್ಪಷ್ಟನೆ

  1. ದುಬೈಯಿಂದ ಕನ್ನೂರಿಗೆ ಬಂದಂತಹ ಎಲ್ಲಾ ಪ್ರಯಾನಿಕರಲ್ಲಿ ಕರ್ನಾಟಕ ಗಡಿ ದಾಟಲು ಬೇಕಾದ ಎಲ್ಲಾ ರೀತಿಯ ಪಾಸ್ ಮುಂಚಿತವಾಗಿ ಪ್ರಯಾಣಿಕರು ತೆಗೆದಿರಿಸಿದ್ದರು…. ನಾನೂ ಇದರಲ್ಲೊಬ್ಬ ಪ್ರಯಾಣಿಕ… ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಿ, ಪಾಸ್ ಪಡೆದುಕೊಂಡವರಾಗಿದ್ದಾರೆ… ಎಲ್ಲಾ ಪ್ರಯಾಣಿಕರು….

Leave a Reply

Your email address will not be published. Required fields are marked *

error: Content is protected !!