ಉಡುಪಿ: ನಿಯಮ ಉಲ್ಲಂಘಿಸಿ ಸಭೆ ಸಮಾರಂಭ -ಕಠಿಣ ಕ್ರಮದ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ
ಉಡುಪಿ ಜೂ.24(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ ಸೋಂಕಿನ ಪ್ರಭಾವ ಇನ್ನೂ ಇದೆ. ಹೀಗಿರುವಾಗ ಸರಕಾರದ ಕೋವಿಡ್ ನಿಯಮ ಉಲ್ಲಂಘನೆ ಮಾಡಿ ಯಾರಾದರೂ ಜಿಲ್ಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೆಳಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ವಿಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿದ ಅವರು, ಕಾನೂನು ಎಲ್ಲರಿಗೂ ಒಂದೇ, ಜಿಲ್ಲಾಧಿಕಾರಿಯಾಗಿ ನಾನು ಕಾನೂನು ಪಾಲನೆ ಮಾಡಿದರೆ ಸಾರ್ವಜನಿಕರು ಪಾಲನೆ ಮಾಡುತ್ತಾರೆ. ಜನ ಪ್ರತಿನಿಧಿಗಳು ಅವರ ಕಾನೂನು ಪಾಲನೆ ಮಾಡಿದರೆ ಅವರ ಅನುಯಾಯಿಗಳೂ ಪಾಲನೆ ಮಾಡುತ್ತಾರೆ. ಆದ್ದರಿಂದ ಎಲ್ಲರೂ ಸರಕಾರದ ನಿಯಮಗಳನ್ನು ಪಾಲನೆ ಮಾಡಬೇಕು.
ಸರಕಾರ ಜಿಲ್ಲೆಯಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲಿಕೆ ಮಾಡಿದೆ, ಆದರೂ ಸರಕಾರ ರೂಪಿಸಿದ ನಿಯಮಗಳನ್ನು ಯಥಾವತ್ತಾಗಿ ಪಾಲಿಸಬೇಕು. ಜಿಲ್ಲೆಯಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಗಳಾಗುತ್ತಿದೆ. ಮದುವೆ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿದ್ದಾರೆ. ಬಸ್ ಗಳಲ್ಲಿ 50% ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಿದರೂ ಹೆಚ್ಚುವರಿ ಜನರು ಪ್ರಯಾಣಿಸುತ್ತಿದ್ದಾರೆ. ಹೋಟೆಲ್ ಗಳಲ್ಲಿಯೂ ಹೆಚ್ಚಿನ ಅವಧಿಯಲ್ಲಿ ಗ್ರಾಹಕರಿಗೆ ಅನುಮತಿ ನೀಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಯಾರೂ ಕೂಡಾ ನಿಯಮ ಉಲ್ಲಂಘನೆ ಮಾಡಬಾರದು ಎಂದು ಮನವಿ ಮಾಡಿಕೊಂಡರು.
ಇದೇ ವೇಳೆ ಯಾವುದೇ ಕಾರ್ಯಕ್ರಮ ಮಾಡಲು ಅವಕಾಶ ಇಲ್ಲ ಅಂದರೂ ದಿನನಿತ್ಯ ಕಾರ್ಯಕ್ರಮಗಳು ನಡೆಯುತ್ತಿದೆ. ಜಿಲ್ಲಾಡಳಿತಕ್ಕೆ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಅಧಿಕಾರ ಇಲ್ಲ ಎಂದಾದರೆ ಮತ್ಯಾರು ಈ ಕಾರ್ಯಕ್ರಮಗಳಿಗೆ ಅನುಮತಿ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಅನುಮತಿ ಇಲ್ಲದೇ ಕಾರ್ಯಕ್ರಮ ಮಾಡುವವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು. ಅದ್ದರಿಂದ ಯಾರೂ ಕೂಡಾ ನಿಯಮ ಮೀರಿ ಕಾರ್ಯಕ್ರಮ ಆಯೋಜಿಸದಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಒಂದು ವೇಳೆ ಮನವಿಗೆ ಬೆಲೆ ಕೊಡದೇ ಕಾನೂನು ಉಲ್ಲಂಘನೆ ಮಾಡುವುದು ಕಂಡು ಬಂದರೆ ಅಂತವರ ವಿರುದ್ದ ಎಪಿಡಮಿಕ್ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.