ಬ್ರಹ್ಮಾವರ: ಬೈಕ್’ಗೆ ಬೊಲೆರೋ ಡಿಕ್ಕಿ ಹೊಡೆದು ಪರಾರಿ- ಜಿನಸಿ ಅಂಗಡಿ ವ್ಯಾಪಾರಿ ಮೃತ್ಯು
ಬ್ರಹ್ಮಾವರ:(ಉಡುಪಿ ಟೈಮ್ಸ್ ವರದಿ) ಬೊಲೆರೋ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ನಡೂರಿನಲ್ಲಿ ನಡೆದಿದೆ
ಕಾಡೂರಿನ ಜಿನಸಿ ಅಂಗಡಿ ಮಾಲೀಕ, ನಡೂರು ನಿವಾಸಿ ಹರೀಶ (36) ಮೃತ ದುರ್ದೈವಿ. ಇವರು ಚಾಂತಾರಿನ ತನ್ನ ಪತ್ನಿ ಮನೆಯಿಂದ ಬೆಳಿಗ್ಗೆ 7.45 ಕ್ಕೆ ಮನೆ ಕಡೆ ಬರುತ್ತಿದ್ದಾಗ ಬಾರ್ಕೂರಿನಿಂದ ಮಂದಾರ್ತಿಯಿಂದ ಬಂದ ಬೊಲೆರೋ ವಾಹನ ಅತೀ ವೇಗವಾಗಿ ಬಂದು ಹರೀಶ್ ಬೈಕ್ ಗೆ ಡಿಕ್ಕಿ ಹೊಡೆದಿದೆ.ಡಿಕ್ಕಿ ರಭಸಕ್ಕೆ ಹರೀಶ್ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಘಟನೆ ಬಳಿಕ ಬೊಲೆರೋ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದ.
ಬಳಿಕ ಮಾಹಿತಿ ಪಡೆದ ಹರೀಶ್ ಸಹೋದರ ದಿನೇಶ್ ಪೂಜಾರಿ ಕೂಡಲೇ ಘಟನಾ ಸ್ಥಳಕ್ಕೆ ಹೋಗಿ ನೋಡಿದಾಗ ಹರೀಶ್ ರವರು ತೀವ್ರ ಗಾಯಗೊಂಡು ಬಿದ್ದಿರುವುದು ಕಂಡು ಬಂದಿದ್ದು ಉಪಚರಿಸಿದಾಗ ಅವರು ಮಾತನಾಡುವ ಸ್ಥಿತಿಯಲ್ಲಿಇರಲಿಲ್ಲ. ತಕ್ಷಣ ಚಿಕಿತ್ಸೆಗೆ ಬ್ರಹ್ಮಾವರದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿ ಮಧ್ಯೆ ಹರೀಶನು ಮೃತ ಪಟ್ಟಿರುವುದಾಗಿ ಸಹೋದರ ದೂರು ನೀಡಿದ್ದಾರೆ.
ಘಟನೆ ನಡೆದ ಒಂದು ತಾಸಿನಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ ಬ್ರಹ್ಮಾವರ ಪೊಲೀಸರು: ಠಾಣಾಧಿಕಾರಿ ಗುರುನಾಥ ಬಿ. ಹಾದಿಮನಿ ಮತ್ತು ಅವರ ತಂಡ ಬೆಳಿಗ್ಗೆ ಘಟನೆ ನಡೆದ ಮಾಹಿತಿ ಸಿಕ್ಕಿದ ತಕ್ಷಣ ಘಟನಾ ಸ್ಥಳಕ್ಕೆ ಬಂದು ಅಪಘಾತವೆಸಗಿದ ವಾಹನದ ಮಾಹಿತಿ ಕಲೆ ಹಾಕಿ ಆರೋಪಿ ಬೊಲೆರೋ ವಾಹನದ ಚಾಲಕನ್ನು ಬಂಧಿಸಿದ್ದಾರೆ. ಆರೋಪಿ ಪೆರಂಪಳ್ಳಿಯ ಸೆಂಚುರಿ ಫಾರ್ಮ್‌ನ ಉದ್ಯೋಗಿಯಾಗಿದ್ದು, ಘಟನೆ ನಡೆಸಿ ವಾಹನ ನಿಲ್ಲಿಸದೆ ಪರಾಯಾಗಿದ್ದತನನ್ನು ಠಾಣಾಧಿಕಾರಿ ಗುರುನಾಥ ಬಿ. ಹಾದಿಮನಿ ತಂಡ ಬಂಧಿಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರೋಪಿಯ ಪತ್ತೆ ಹಚ್ಚಿದ ಪೊಲೀಸರ ಕಾರ್ಯ ಸ್ಥಳೀಯವಾಗಿ ಪ್ರಶಂಸೆಗೆ ಒಳಗಾಗಿದೆ.
ಮೃತ ಹರೀಶ್ ಪೂಜಾರಿ ಕಳೆದ ಎಂಟು ತಿಂಗಳ ಹಿಂದೆ ಮದುವೆಯಾಗಿದ್ದು, ಮೂರು ತಿಂಗಳ ಗರ್ಭಿಣಿ ಪತ್ನಿ, ತಂದೆ, ತಾಯಿ, ಸಹೋದರರನ್ನು ಅಗಲಿದ್ದಾರೆ.