ಉಡುಪಿ: ಕಾರ್ಮಿಕ ಇಲಾಖೆಯಿಂದ ಕೋವಿಡ್ ನಿಯಮ ಉಲ್ಲಂಘಿಸಿ ಆಹಾರ ಕಿಟ್ ವಿತರಣೆ
ಉಡುಪಿ ಜೂ.21(ಉಡುಪಿ ಟೈಮ್ಸ್ ವರದಿ): ಜಿಲ್ಲೆಯನ್ನು ಕೋವಿಡ್ ಲಾಕ್ ಡೌನ್ ನಿಂದ ವಿನಾಯಿತಿ ನೀಡಿ ಅನ್ಲಾಕ್ ಘೋಷಣೆ ಆಗುತ್ತಿದ್ದಂತೆ ಇತ್ತ ಕೋವಿಡ್ ನಿಯಮಗಳು ಉಲ್ಲಂಘನೆಯೂ ಆರಂಭವಾಗಿದೆ.
ಇಂದು ಮಧ್ಯಾಹ್ನ ಅನ್ಲಾಕ್ ಘೋಷಣೆ ಆಗುತ್ತಿದ್ದಂತೆ ಸಂಜೆ ಉಡುಪಿಯ ಹೃದಯ ಭಾಗದಲ್ಲಿರುವ ಕಲ್ಸಂಕದ ರಾಯಲ್ ಗಾರ್ಡನ್ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ನಡೆದ ಕಾರ್ಮಿಕರಿಗೆ ಆಹಾರ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ನಿಯಮ ಉಲ್ಲಂಘನೆ ಆಗಿರುವುದು ತಿಳಿದು ಬಂದಿದೆ.
ಈ ಕಾರ್ಯಕ್ರಮದಲ್ಲಿ 500 ಕ್ಕೂ ಅಧಿಕ ಮಂದಿ ಸಾಮಾಜಿಕ ಅಂತರ ಇಲ್ಲದೇ ಭಾಗವಹಿಸಿದ್ದರು. ಕಿಕ್ಕಿರಿದು ಜನ ಸೇರಿದ್ದ ಈ ಕಾರ್ಯಕ್ರಮದಲ್ಲಿ ಶಾಸಕರು ಸೇರಿದಂತೆ ಅನೇಕ ಸರಕಾರಿ ಅಧಿಕಾರಿಗಳೂ ಭಾಗವಹಿಸಿದ್ದರು. ಕಟ್ಟು ನಿಟ್ಟಿನ ಕೋವಿಡ್ ನಿಯಮದ ಜಾರಿ ಬಳಿಕ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯನ್ನು ಅನ್ಲಾಕ್ ಮಾಡಿ ಸರಕಾರ ಆದೇಶ ಹೊರಡಿಸಿದೆ. ಆದರೆ ಜಿಲ್ಲೆಯಲ್ಲಿ ಅನ್ಲಾಕ್ ಘೋಷಣೆ ಆಗುತ್ತಿದ್ದಂತೆ ಕೋವಿಡ್ ಭೀಕರತೆಯನ್ನು ಅರಿತೂ ಕೂಡಾ ನಿಯಮಗಳ ಉಲ್ಲಂಘಿಸುತ್ತಿರುವ ಘಟನೆ ಗಳು ನಡೆಯುತ್ತಿರುವುದು ಅದೂ ಕೂಡಾ ಸರಕಾರಿ ಅಧಿಕಾರಿಗಳೇ ಜನ ಸೇರಿಸಿ ನಿಯಮ ಉಲ್ಲಂಘಿಸಿ ಕಾರ್ಯಕ್ರಮ ನಡೆಸಿರುವುದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಜಿಲ್ಲಾಧಿಕಾರಿಗಳು ಇಂದು ಮುಂಜಾನೆಯೇ ಸ್ಪಷ್ಟವಾಗಿ ನಿಯಮ ಉಲ್ಲಂಘಿಸಿ ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲುವ ಎಚ್ಚರಿಕೆ ನೀಡಿದ್ದರು. ಹೀಗಿರುವಾಗ ಜಿಲ್ಲಾಡಳಿತ ದ ಅಧಿಕಾರಿಗಳೇ ನಿಯಮ ಉಲ್ಲಂಘನೆ ಮಾಡಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ನಗರದ ಕಲ್ಸಂಕದ ರಾಯಲ್ ಗಾರ್ಡನ್ ನಲ್ಲಿ ನಡೆದ ಆಹಾರ ಕಿಟ್ ಗಳ ವಿತರಣಾ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ‘‘ಉಡುಪಿ ಟೈಮ್ಸ್ “ಗೆ ಪ್ರತಿಕ್ರಿಯೆ ನೀಡಿ ಮುಂದಿನ ದಿನಗಳಲ್ಲಿ ನಡೆಯುವ ತಾಲೂಕು ಮಟ್ಟದ ಕಾರ್ಯಕ್ರಮವನ್ನು ನಡೆಸುವಾಗ ವ್ಯವಸ್ಥಿತವಾಗಿ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸರಕಾರದ ಯೋಜನೆ ಆಗಿರುವು ದರಿಂದ ಫಲಾನುಭವಿಗಳಿಗೆ ಕಿಟ್ ನೀಡಲೇ ಬೇಕಾಗುತ್ತದೆ.ಕಿಟ್ ವಿತರಣಾ ಕಾರ್ಯಕ್ರಮ ಆಗಿರುವುದರಿಂದ ಹೆಚ್ಚು ಜನ ಸೇರಿದ್ದಾರೆ. ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಲಾಗಿತ್ತು ಅಲ್ಲದೆ ಸಾಮಾಜಿಕ ಅಂತರ ಇಲ್ಲದಿದ್ದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದೆ. ಆದ್ದರಿಂದ ಮುಂದೆ ತಾಲೂಕು ಮಟ್ಟದಲ್ಲಿ ನಡೆಯುವ ಕಿಟ್ ವಿತರಣಾ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.