ಪಾದೂರಿನ ಘಟಕದಲ್ಲಿ ಅನಿಲ ಸೋರಿಕೆ: ಆತಂಕ ಪಡುವ ಅಗತ್ಯ ಇಲ್ಲ
ಉಡುಪಿ: ಉಡುಪಿಯ ಪಾದೂರಿನಲ್ಲಿರುವ ಐಎಸ್ ಪಿ ಆರ್ ಎಲ್ ಘಟಕದಲ್ಲಿ ಸ್ಥಳೀಯರಿಗೆ ಅನಿಲ ಸೋರಿಕೆಯ ಅನುಭವ ಆಗಿದ್ದು ಆತಂಕ ಮನೆ ಮಾಡಿದೆ.ಕಾಪು ತಾಲೂಕಿನ ಪಾದೂರಿನಲ್ಲಿ ಈ ಘಟಕ ಇದ್ದು ,ಕೇಂದ್ರ ಸರಕಾರದ ಕಚ್ಚಾ ತೈಲ ಘಟಕ ಇದಾಗಿದೆ. ಇಲ್ಲಿ ಮಧ್ಯಾಹ್ನದ ವೇಳೆ ಘಟಕದ ಆಸುಪಾಸಿನಲ್ಲಿ ಪೆಟ್ರೋಲ್ ಕಮಟು ವಾಸನೆ ಬರತೊಡಗಿದ್ದು ,ಮಕ್ಕಳಿಗೆ ಉಸಿರಾಟಕ್ಕೆ ಸಮಸ್ಯೆ ಯಾಗುವಂತಹ ವಾಸನೆಯ ಅನುಭವ ಆಗಿದೆ. ಹೀಗಾಗಿ ಇದು ಅನಿಲ ಸೋರಿಕೆ ಆಗಿರಬಹುದು ಎಂದು ಸ್ಥಳಿಯರು ಆತಂಕಗೊಂಡ ಪ್ರಸಂಗ ನಡೆದಿದೆ.ವಿಷಯ ತಿಳಿದು ಸ್ಥಳಕ್ಕೆ ತಹಶಿಲ್ದಾರ್ ಮಹಮ್ಮದ್ ಇಸಾಕ್,ಪೋಲಿಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ,ಮಾಲಿನ್ಯ ನಿಯಂತ್ರಣ ಅಧಿಕಾರಿ ವಿಜಯ ಹೆಗ್ಡೆ, ಜಿ.ಪಂ ಸದಸ್ಯೆ ಶಿಲ್ಪಾ ಜಿ ಸುವರ್ಣ ಭೇಟಿ ನೀಡಿದರು.ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸ್ಥಳಕ್ಕೆ ಭೇಟಿ ನೀಡಿದ ಐಎಸ್‌ಪಿಆರ್‌ಎಲ್ ಪ್ರೊಜೆಕ್ಟ್ ಮ್ಯಾನೇಜರ್ ವಿಪಿನ್ ಕುಮಾರ್ ಅನಿಲ ಸೋರಿಕೆಯ ವಿಚಾರವನ್ನು ನಿರಾಕರಿಸಿದ್ದಾರೆ. ಕಚ್ಛಾ ತೈಲ ಘಟಕದೊಳಗೆ ಎಲ್ಲೂ ಅನಿಲ ವಾಸನೆ ಕಂಡು ಬಂದಿಲ್ಲ. ಹೊರ ಬಾಗದಲ್ಲಿ ಏನಾದರೂ ಸೋರಿಕೆ ಇದೆಯೇ ಎನ್ನುವುದನ್ನು ತಜ್ಞರ ಮೂಲಕ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ. ಜನಜಾಗೃತಿ ಸಮಿತಿ ಸಂಚಾಲಕ ಅರುಣ್ ಶೆಟ್ಟಿ ಪಾದೂರು, ಕ್ರೂಡ್ ಆಯಿಲ್ ಘಟಕದಿಂದ ಅನಿಲದ ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಬಂದ ಕೂಡಲೇ ಸಂಬಂಧಪಟ್ಟ ಕಂಪೆನಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಆದರೆ ಕಂಪೆನಿಯ ಅಧಿಕಾರಿಗಳು ಸ್ಥಳೀಯರ ಮನವಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬಿಟ್ಟಿದ್ದಾರೆ ಎಂದು ಹೇಳಿದರು.ಈ ಮಧ್ಯೆ ಉಡುಪಿ ಡಿಸಿ ಪ್ರತಿಕ್ರಿಯೆ ನೀಡಿ ಅಂತಹ ಯಾವುದೇ ಅನಾಹುತ ಆಗಿಲ್ಲ.ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. |