ಉಡುಪಿ, ಶಿವಮೊಗ್ಗ ಸಹಿತ ಆರು ಜಿಲ್ಲೆಗೆ ಅನ್ ಲಾಕ್ 2.0 ಘೋಷಣೆ
ಬೆಂಗಳೂರು ಜೂ.21(ಉಡುಪಿ ಟೈಮ್ಸ್ ವರದಿ): ಕೋವಿಡ್ ಪಾಸಿಟಿವಿಟಿ ದರ ಕಡಿಮೆಯಾಗುತ್ತಿರುವ ಕಾರಣ ಉಡುಪಿ, ಶಿವಮೊಗ್ಗ ಸೇರಿದಂತೆ ಮತ್ತೆ ಆರು ಜಿಲ್ಲೆಗಳನ್ನು ಅನ್ ಲಾಕ್ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಇಂದಿನಿಂದಲೇ ಅನ್ ಲಾಕ್ ಆಗುವ ಆರು ಜಿಲ್ಲೆಗಳಾದ ಉಡುಪಿ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಮತ್ತು ವಿಜಯಪುರಗಳಲ್ಲಿ ನಿಯಮ ಸಡಿಲಿಕೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಅದರಂತೆ ಈ ಜಿಲ್ಲೆಗಳಲ್ಲಿ ಸಂಜೆ 5 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ.
ಉಡುಪಿ: ಜಿಲ್ಲೆಯಲ್ಲಿ ಕೆ ಎಸ್ ಆರ್ ಟಿಸಿ ಬಸ್ ಸಂಚಾರ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಬಸ್ ಗಳಲ್ಲಿ 50% ಕ್ಕಿಂತ ಹೆಚ್ಚಿನ ಪ್ರಯಾಣಿಕರಿಗೆ ಅವಕಾಶ ನೀಡಿದರೆ ಅಂತಹ ಚಾಲಕ ಹಾಗೂ ನಿರ್ವಾಹಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಇಂದು ಉಡುಪಿಯಲ್ಲಿ ನಡೆದ ಕೋವಿಡ್ ಲಸಿಕಾ ಮೇಳದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೋನಾ ಮುಕ್ತ ಜಿಲ್ಲೆಯನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. ಜಿಲ್ಲೆಯಲ್ಲಿ ಈಗಲೂ ಕೊರೋನಾ ಪಾಸಿಟಿವಿಟಿ ದರ 5% ರಷ್ಟು ಇದ್ದೇ ಇದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಪ್ರಕರಣಗಳು ಯಾವ ಪ್ರದೇಶಗಳಲ್ಲಿ ಮತ್ತು ಯಾಕೆ ಹೆಚ್ಚಾಗಿದೆ ಎಂಬುದನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಗಾಗಿ ಯಾರು ನಿಯಮ ಉಲ್ಲಂಘಿಸುತ್ತಾರೋ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಯಾರಿಗಾದರೂ ಕೋವಿಡ್ ಲಕ್ಷಣಗಳು ಕಂಡು ಬಂದರೆ ತಕ್ಷಣ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಮನವಿ ಮಾಡಿಕೊಂಡಿದ್ದಾರೆ. ಉಡುಪಿಯಲ್ಲಿ ಕೆಎಸ್ ಆರ್ ಟಿಸಿ ಬಸ್ ಸಂಚಾರ ಸೇವೆ ಆರಂಭಗೊಂಡಿದ್ದು, ಉಡುಪಿಯಿಂದ ಕುಂದಾಪುರ, ಕಾರ್ಕಳ, ಬೈಂದೂರು, ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಕಡೆಗೆ ಬಸ್ ಸೇವೆ ಆರಂಭಿಸಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ಬಸ್ ಸಂಚಾರ ಇರುವುದಿಲ್ಲ ಎಂದು ತಿಳಿದು ಬಂದಿದೆ.
Usefull news are available from this channel. Thank you sir