166 ಮಂದಿಯಲ್ಲಿ ಪಾಸಿಟಿವ್ ದೃಢ- ಉಡುಪಿಯ 35 ವರ್ಷದ ಮಹಿಳೆ ಮೃತ್ಯು
ಉಡುಪಿ ಜೂ.20(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಪತ್ತೆಯಾಗುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ.
ಜಿಲ್ಲೆಯಲ್ಲಿ ಇಂದು 166 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಪೈಕಿ ಉಡುಪಿಯಲ್ಲಿ 59, ಕುಂದಾಪುರ 44, ಕಾರ್ಕಳ 57 ಹಾಗೂ ಹೊರ ಜಿಲ್ಲೆಯ 6 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 1870 ಕ್ಕೆ ಇಳಿಕೆಯಾಗಿದೆ.
ಇಂದು ಜಿಲ್ಲೆಯಲ್ಲಿ ಉಡುಪಿಯ 35 ವರ್ಷದ ಓರ್ವ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಜೂ.19ರಂದು ಜಿಲ್ಲೆಯಲ್ಲಿ 180 ಮಂದಿ ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿ ಹೊರ ಬಂದಿದ್ದು, ಕೋವಿಡ್ ಎರಡನೇ ಅಲೆ ಆರಂಭ ಆದಾಗಿನಿಂದ ಈವರೆಗೆ 39,693 ಮಂದಿ ಗುಣಮುಖರಾಗಿದ್ದಾರೆ. ಹಾಗೂ ಜಿಲ್ಲೆಯಲ್ಲಿ ಒಟ್ಟು ಈ ವರೆಗೆ ಪತ್ತೆಯಾದ 65,356 ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ 63,114 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಕೋವಿಡ್ 2 ನೇ ಅಲೆಯಲ್ಲಿ ಜೂ.19 ರ ವೇಳೆಗೆ ಜಿಲ್ಲೆಯಲ್ಲಿ 2,88,282 ಮಂದಿ ಯನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿದ್ದು, ಈ ಪೈಕಿ 41,745 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ಈ ವರೆಗೆ 2 ನೇ ಅಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 182 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಇನ್ನು ಜಿಲ್ಲೆಯಲ್ಲಿ 5 ಬ್ಲಾಕ್ ಫಂಗಸ್ ಪ್ರಕರಣಗಳು ಸಕ್ರಿಯವಾಗಿದೆ. ಈ ವರೆಗೆ ಉಡುಪಿಯಲ್ಲಿ 4, ಕುಂದಾಪುರದಲ್ಲಿ 6 ಹಾಗೂ ಹೊರ ಜಿಲ್ಲೆಯ 15 ಮಂದಿಯಲ್ಲಿ ಈ ಕಪ್ಪು ಶಿಲೀಂಧ್ರ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ 18ಮಂದಿ ಸೋಂಕಿನಿಂದ ಗುಣ ಮುಖರಾಗಿದ್ದು, ಇಬ್ಬರು ಬ್ಲಾಕ್ ಫಂಗಸ್ ಗೆ ಬಲಿಯಾಗಿದ್ದಾರೆ. ಒಟ್ಟು 25 ಬ್ಲಾಕ್ ಫಂಗಸ್ ನ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದೆ.