ಉಡುಪಿ: ರಾ.ಹೆದ್ದಾರಿಯಲ್ಲಿ 4ಕಡೆ ಕಾಲು ಸೇತುವೆಗೆ 4.36 ಕೋಟಿ ರೂ.ಮಂಜೂರು: ಸಂಸದೆ ಶೋಭಾ ಕರಂದ್ಲಾಜೆ
ಉಡುಪಿ ಜೂ.20(ಉಡುಪಿ ಟೈಮ್ಸ್ ವರದಿ): ಉಡುಪಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 4 ಕಾಲು ಸೇತುವೆ ರಚನೆಗೆ ಕೇಂದ್ರ ಸರಕಾರ 4.36 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಹಲವಾರು ಭಾಗಗಳಲ್ಲಿ ಕ್ರಾಸಿಂಗ್ ಗಳನ್ನು ನಿರ್ಮಾಣ ಮಾಡುವ ಅಗತ್ಯತೆ ಇರುವ ಕುರಿತು ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ವಿನಂತಿ ಮಾಡಲಾಗಿತ್ತು.
ಇದೀಗ ಕ್ಷೇತ್ರದ ಜನರ ಅಪೇಕ್ಷೆಯ ಮೇರೆಗೆ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ ಕೇಂದ್ರ ಭೂ ಸಾರಿಗೆ ಸಚಿವರು ಉಡುಪಿ ಜಿಲ್ಲೆಯ ನಾಲ್ಕು ಪ್ರದೇಶಗಳಲ್ಲಿ ಒಟ್ಟು ರೂ. 4.36 ಕೋಟಿಗಳ ವೆಚ್ಚದಲ್ಲಿ ಪಾದಚಾರಿ ಕಾಲುಸೇತುವೆಗಳನ್ನು ನಿರ್ಮಿಸಲು ಅನುಮೋದನೆ ನೀಡಿ ಅನುದಾನ ಮಂಜೂರು ಮಾಡಿದ್ದಾರೆ. ಅದರಂತೆ, ಬಡಾ ಎರ್ಮಾಳ್, ಆನೆಗುಡ್ಡೆ, ಮಹೇಶ್ ಆಸ್ಪತ್ರೆ ಸಮೀಪ ಹಾಗೂ ಅಂಬಾಗಿಲು ಬಳಿ ತಲಾ 1.08 ಕೋಟಿ ರೂ ವೆಚ್ಚದಲ್ಲಿ ಸ್ಟೀಲ್ ಕಾಲುಸೇತುವೆ ನಿರ್ಮಾಣ ಮಾಡಲಾಗುತ್ತದೆ.
ಜನ ಸಂಚಾರ ಹೆಚ್ಚಿರುವ ಈ ಪ್ರದೇಶಗಳಲ್ಲಿ, ರಸ್ತೆಯನ್ನು ದಾಟಲು ಜನಸಾಮಾನ್ಯರಿಗೆ ಸಹಾಯಕವಾಗುವಂತೆ ಸ್ಟೀಲ್ ಪಾದಚಾರಿ ಕಾಲುಸೇತುವೆಗಳನ್ನು ನಿರ್ಮಾಣ ಮಾಡಲು ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡಿರುತ್ತದೆ. ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯು ಪೂರ್ಣಗೊಂಡಿದ್ದು ಶೀಘ್ರದಲ್ಲಿಯೇ ಕೆಲಸ ಕಾರ್ಯಗಳು ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಜನರ ಅಪೇಕ್ಷೆಗೆ ಸ್ಪಂದಿಸಿ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗಳಿಗೆ ಅನುಮೋದನೆ ನೀಡಿದ ಕೇಂದ್ರ ಸರಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.