ಬ್ರಹ್ಮಾವರ: ಗೇರುಬೀಜ ಫ್ಯಾಕ್ಟರಿ ಮಾಲಕನಿಗೆ ರೂ. 39 ಲಕ್ಷ ವಂಚನೆ

ಬ್ರಹ್ಮಾವರ ಜೂ.20(ಉಡುಪಿ ಟೈಮ್ಸ್ ವರದಿ): ಟ್ರೇಡಿಂಗ್ ಕಂಪೆನಿಯ ಮಾಲಕ ಎಂದು ಪರಿಚಯಿಸಿಕೊಂಡ ಗುಜರಾತಿನ ವ್ಯಾಪರಿಯೊಬ್ಬ ಬ್ರಹ್ಮಾವರದ ಕ್ಯಾಶು ಫ್ಯಾಕ್ಟರಿಯ ಮಾಲಕರೊಬ್ಬರಿಗೆ ಲಕ್ಷಾಂತರ ರೂ ವಂಚಿಸಿರುವ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.

ಕರ್ಜೆಯ ಕ್ಯಾಶ್ಯು ಫ್ಯಾಕ್ಟರಿಯ ಮಾಲಕ ಪ್ರಶಾಂತ್ ವಂಚನೆಗೆ ಒಳಗಾದವರು, ಗುಜರಾತಿನ ವ್ಯಾಪರಿ ವಚನ ರಾಮ್ ಹಾಜ ರಾಮ್ ಚೌಧುರಿ ಲಕ್ಷಾಂತರ ರೂ ವಂಚಿಸಿರುವ ಆರೋಪಿ. 2019 ರ ಫೆ.20 ರಂದು ಪ್ರಶಾಂತ್ ಅವರ ಗೇರು ಬೀಜ ಘಟಕಕ್ಕೆ ಭೇಟಿ ನೀಡಿದ ಆರೋಪಿ ತಾನು ಗುಜರಾತ್ ನಲ್ಲಿರುವ ಜಯಮಹಾದೇವ್ ಟ್ರೇಡಿಂಗ್ ಕಂಪೆನಿಯ ಮಾಲಕನೆಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ ಈ ಸಂಸ್ಥೆಯು ಆಹಾರ ವಸ್ತುಗಳ ಮಾರಾಟ ಮಾಡುವ ಸಂಸ್ಥೆಯಾಗಿದ್ದು, ತನಗೆ ಭಾರೀ ಪ್ರಮಾಣದ ಗೇರು ಬೀಜದ ಅಗತ್ಯ ವಿರುವುದಾಗಿ, ತನಗೆ ಗೇರು ಬೀಜ ಮಾರಾಟ ಮಾಡಿದರೆ ಯಾವುದೇ ರೀತಿಯ ತೊಂದರೆ ಇಲ್ಲದಂತೆ ಗೇರು ಬೀಜ ಖರೀದಿಸಿದ ಹಣವನ್ನು ಪಾವತಿ ಮಾಡುವುದಾಗಿ ಪ್ರಶಾಂತ್ ತಿಳಿಸಿದ್ದ ಅಲ್ಲದೆ ಬಳಿಕ ಮುಂದಕ್ಕೆ ಲಿಖಿತ ಕರಾರು ಮಾಡಿಕೊಳ್ಳುವುದಾಗಿನಂಬಿಸಿದ್ದ.

ಇದನ್ನು ನಂಬಿದ ಪ್ರಶಾಂತ್ ಅವರು, ಇದಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ಸಂಸ್ಥೆಯ ಮ್ಯಾನೆಜರ್ ಹರಿಪ್ರಸಾದ್ ಶೆಟ್ಟಿ ರವರ ಸಮಕ್ಷಮ ನಡೆಸಿದ್ದರು. ಪ್ರಶಾಂತ್ ಅವರನ್ನು ನಂಬಿಸುವ ಸಲುವಾಗಿ ಆರೋಪಿಯು ಮೊದ ಮೊದಲು ಅಂದರೆ 2019 ರ ಮಾ.13 ರಿಂದ ಜು 8 ರ ವರೆಗೆ ಗೇರು ಬೀಜ ಘಟಕದಿಂದ ಹಲವಾರು ಬಾರಿ ಸುಮಾರು  26,86,574 ರೂ ಮೌಲ್ಯದ ಗೇರು ಬೀಜವನ್ನು ಪಡೆದುಕೊಂಡು, ಮೊತ್ತವನ್ನು ವಿವಿಧ ದಿನಾಂಕಗಳಂದು ಪಾವತಿಸಿ ನಂಬಿಕೆಯನ್ನು ಗಳಿಸಿಕೊಂಡಿದ್ದ. ಅಲ್ಲದೇ ಪ್ರಶಾಂತ್ ಅವರು ಮಾರಾಟದ ಬಗ್ಗೆ ಸೂಕ್ತ ಲಿಖಿತ ಒಪ್ಪಂದ/ಕರಾರು ಮಾಡಿಕೊಳ್ಳುವ ಬಗ್ಗೆ ಪ್ರಸ್ತಾಪನೆ ಮಾಡಿದಾಗಲೆಲ್ಲಾ ಆರೋಪಿಯು ಸುಳ್ಳು ಕಾರಣಗಳನ್ನು ನೀಡುತ್ತಾ ಪ್ರಸ್ತಾವನೆಯನ್ನು ಮುಂದೆ ಹಾಕುತ್ತಿದ್ದ. 
ಆರೋಪಿ ತನಗೆ ವಂಚಿಸಬಹುದು ಎಂದು ಅರಿಯದೆ ಪ್ರಶಾಂತ್ ಅವರು ಆರೋಪಿಯ ಮಾತು ನಂಬಿ 2019ರ ಜು 9 ರಿಂದ 2020 ರ ಮಾ.10 ರ ವರೆಗೆ ಅವರ ಸಂಸ್ಥೆಯಿಂದಒಟ್ಟು 99,95,604‌ ರೂ ಮೌಲ್ಯದ ಗೇರು ಬೀಜವನ್ನು ಆರೋಪಿಯ ಸಂಸ್ಥೆಗೆ ರವಾನಿಸಿದ್ದರು.

ಆದರೇ ಆರೋಪಿಯು ಸರಕಿನ ಮೊತ್ತವನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸದೇ ಬಾಕಿ ಉಳಿಸಿಕೊಳ್ಳತ್ತಾ ಬಂದಿದ್ದಾನೆ. ಈ ಮೂಲಕ ಆರೋಪಿಯು ಪ್ರಶಾಂತ್ ಅವರಿಗೆ ಒಟ್ಟು 39,14,461 ಪಾವತಿಸದೇ ವಂಚಿಸಿರುತ್ತಾನೆ. ಈ ಬಗ್ಗೆ ಹಣ ಮರುಪಾವತಿಸುವಂತೆ ಹಲವಾರು ಬಾರಿ ಫೋನ್ ಮಾಡಿ ಸಂಪರ್ಕಿಸಿದಾಗ ಸುಳ್ಳು ಕಾರಣಗಳನ್ನು ನೀಡುತ್ತಾ ದಿನ ಮುಂದುಡುತ್ತಾ ಬಂದಿದ್ದು, ನಂತರ ಉದ್ದೇಶ ಪೂರ್ವಕವಾಗಿ ಕರೆಗಳನ್ನುಸ್ವೀಕರಿಸದೆ ನೀರಾಕರಿಸಿರುತ್ತಾನೆ. ಆದ್ದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ  ಪ್ರಶಾಂತ್ ಅವರು ನೀಡಿದ ದೂರಿನ ಆಧಾರದಲ್ಲಿ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!