ರೈತರ ಹಿತಕ್ಕೆ ಧಕ್ಕೆಯಾಗುವುದಾದರೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ:ಸಿಎಂ

ಬೆಂಗಳೂರು: ಎಪಿಎಂಸಿ ತಿದ್ದುಪಡಿ ಕಾಯ್ದೆಯ ಅನುಷ್ಠಾನದಿಂದ “ರೈತರು ಮೊದಲು” ಎಂಬ ಘೋಷವಾಕ್ಯದ ಅನುಷ್ಠಾನ ಸಾಧ್ಯವಾಗುತ್ತದೆ. ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಅಥವಾ ನೇರವಾಗಿ ಮಾರಾಟ ಮಾಡುವ ಅವಕಾಶ ಹೊಂದಿರುತ್ತಾರೆ. ಪರಿಣಾಮ ರೈತರಿಗೆ ತಮ್ಮ ಉತ್ಪನ್ನಗಳಿಗೆ ಯೋಗ್ಯ ಧಾರಣೆ ದೊರೆಯುವ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಅವರು ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದವನು. ರೈತರ ಹಿತಕ್ಕೆ ಧಕ್ಕೆಯಾಗುವುದಾದರೆ ಒಂದು ಕ್ಷಣವೂ ಮುಖ್ಯಮಂತ್ರಿಯಾಗಿ ಮುಂದುವರಿಯುವುದಿಲ್ಲ ಎಂದರು. ಎಪಿಎಂಸಿ ಕಾಯ್ದೆ ತಿದ್ದುಪಡಿ ಸಂಬಂಧ ಎದ್ದಿರುವ ವಿವಾದ ಕುರಿತು ಸಮರ್ಥನೆ ನೀಡಿದರು.

ಈ ಕಾಯ್ದೆಯಿಂದ ಎಪಿಎಂಸಿಗಳ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. ಅವು ಹಿಂದಿನಂತೆ ಮುಂದುವರೆಯುತ್ತವೆ. ಮಾರುಕಟ್ಟೆ ಪ್ರಾಂಗಣದ ಹೊರಗೆ ಅಧಿಸೂಚಿತ ಕೃಷಿ ಉತ್ಪನ್ನಗಳ ವಹಿವಾಟು ಮತ್ತು ಮೇಲ್ವಿಚಾರಣೆಯನ್ನು ಕೃಷಿ ಮಾರಾಟ ನಿರ್ದೇಶಕರು ಮಾಡುತ್ತಾರೆ. ಈ ತಿದ್ದುಪಡಿ ಕಾಯ್ದೆಯಿಂದ ಎಪಿಎಂಸಿ ಕಮಿಟಿಗಳನ್ನು ಮಾರುಕಟ್ಟೆ ಪ್ರಾಂಗಣಕ್ಕೆ ಸೀಮಿತಗೊಳಿಸಿ ರೈತರು ಉತ್ತಮ ಧಾರಣೆ ಪಡೆಯಲು ಅವಕಾಶ ಒದಗಿಸಿ ಆ ಮೂಲಕ ರೈತರ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಒದಗಿಸಿ ರೈತರ ಹಿತ ಕಾಯಲು ಅವಕಾಶ ನೀಡುತ್ತದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗಾಗಲಿ, ಕೇಂದ್ರ ಸರ್ಕಾರಕ್ಕಾಗಲಿ ರೈತರ ಹಿತಾಸಕ್ತಿಯೇ ಮುಖ್ಯ. 2022ರ ವೇಳೆಗೆ ರೈತರ ಆದಾಯ ದ್ವಿಗುಣ ಮಾಡಬೇಕು. ರೈತರಿಗೆ ನೆರವಾಗಬೇಕು ಎನ್ನುವುದಕ್ಕಾಗಿಯೇ ಅನೇಕ ಕಾರ್ಯಕ್ರಮಗಳನ್ನು ಮತ್ತು ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ. ಈಗಲೂ ಎಪಿಎಂಸಿ ಕಾಯ್ದೆಯನ್ನೇನೂ ನಾವು ತೆಗೆದು ಹಾಕಿಲ್ಲ. ಕೇವಲ ಕಾಯ್ದೆಯ ಎರಡು ಸೆಕ್ಷನ್ ಗಳಿಗೆ ತಿದ್ದುಪಡಿ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಈ ಸುಧಾರಣೆಯ ಉದ್ದೇಶ- ನಮ್ಮ ರೈತರಿಗೆ ಮಾರುಕಟ್ಟೆಯ ಹೆಚ್ಚಿನ ಆಯ್ಕೆಗಳು ಲಭಿಸಲಿವೆ. ನಮ್ಮ ರೈತರು ಎಪಿಎಂಸಿಯಾಗಲೀ ಅಥವಾ ಇತರೇ ವರ್ತಕರ ಅಧೀನಕ್ಕೆ ಒಳಪಡುವುದಿಲ್ಲ. ತಮ್ಮಿಷ್ಟದಂತೆ ಯಾರಿಗೆ ಬೇಕಾದರೂ ಉತ್ಪನ್ನ ಮಾರಾಟ ಮಾಡಬಹುದು. ಬೆಂಬಲ ಬೆಲೆಗೆ ಕಡಿಮೆ ದರದಲ್ಲಿ ಖರೀದಿ ಮಾಡುವ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ. ಈ ಶೋಷಣೆಯನ್ನು ಇನ್ನು ಮುಂದೆ ತಪ್ಪಿಸಬಹುದು.ಇನ್ನು ಮುಂದೆ ಎಪಿಎಂಸಿಯಲ್ಲಿ ವ್ಯವಹಾರ ಮಾಡುವ ವರ್ತಕರು ರೈತರನ್ನು ಶೋಷಣೆ ಮಾಡುವುದು ತಪ್ಪುತ್ತದೆ ಎಂದು ಯಡಿಯೂರಪ್ಪ ವಿವರಿಸಿದರು

Leave a Reply

Your email address will not be published. Required fields are marked *

error: Content is protected !!