ಉಡುಪಿಯಲ್ಲಿ ಕಡಿಮೆಯಾಗದ ಪಾಸಿಟಿವಿಟಿ ದರ- ಇನ್ನಷ್ಟು ಎಚ್ಚರಿಕೆ ತೆಗೆದುಕೊಳ್ಳ ಬೇಕಾಗಿದೆ: ಜಿಲ್ಲಾಧಿಕಾರಿ
ಉಡುಪಿ, ಜೂ.20: ಜಿಲ್ಲೆಯ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಪಾಸಿಟಿವಿಟಿ ದರ ನಿರೀಕ್ಷಿತ ಮಟ್ಟದಲ್ಲಿ ಶೇ.5ಕ್ಕಿಂತ ಕಡಿಮೆಯಾಗದ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.5ಕ್ಕಿಂತ ಕಡಿಮೆ ಬರಬೇಕೆಂಬುದು ನಮ್ಮ ಗುರಿಯಾಗಿತ್ತು. ಆದರೆ ನಾವು ನಿರೀಕ್ಷಿಸಿರುವ ಪ್ರಮಾಣದಲ್ಲಿ ಪಾಸಿಟಿವಿಟಿ ಪ್ರಮಾಣ ಇಳಿಕೆಯಾಗಿಲ್ಲ. ಹೀಗಾಗಿ ಮುಂದೆ ನಾವು ಇನ್ನಷ್ಟು ಎಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ ಈ ಹಿನ್ನಲೆಯಲ್ಲಿ ಕೆಲವು ಜಿಲ್ಲೆಗಳಿಗೆ ಲಾಕ್ ಡೌನ್ ನಲ್ಲಿ ವಿನಾಯಿತಿ ನೀಡದ್ದರೂ ಉಡುಪಿ ಜಿಲ್ಲೆಯಲ್ಲಿ ಮಾತ್ರ ಜೂ.11ರಂದು ಹೊರಡಿಸಿದ ಮಾರ್ಗಸೂಚಿ ಮುಂದಿನ ಆದೇಶದವರೆಗೆ ಮುಂದುವರಿಯಲಿದೆ.
ಈ ಅವಧಿಯಲ್ಲಿ ಅಗತ್ಯ ವಸ್ತುಗಳ ಅಂಗಡಿಗಳು ಬೆಳಗ್ಗೆ 6 ರಿಂದ ಅಪರಾಹ್ನ 2 ರವರೆಗೆ ಮಾತ್ರ ತೆರೆದಿರಲಿದೆ ಎಂದವರು ತಿಳಿಸಿದರು. ಸದ್ಯ ನಮ್ಮ ಜಿಲ್ಲೆಯಲ್ಲಿ ಜೂ.11ರ ಲಾಕ್‌ಡೌನ್ ಸಡಿಲಿಕೆ ಆದೇಶವೇ ಮುಂದುವರೆಯಲಿದೆ. ಬೆಳಗ್ಗೆ 6ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿಡಲು ಅವಕಾಶ ನೀಡಲಾಗುವುದು. ಉಳಿದೆಲ್ಲಾ ಮಾರ್ಗಸೂಚಿಗಳು ಹಿಂದಿನಂತೆ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.