ರಾಜ್ಯ ಸರ್ಕಾರ ಹಾಗೂ ಬಿಜೆಪಿ ರಾಜ್ಯ ಘಟಕದ ಗೊಂದಲ- ಸಿಎಂ ಯಡಿಯೂರಪ್ಪಗೆ ದೆಹಲಿ ಬುಲಾವ್?
ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಬಿಜೆಪಿ ರಾಜ್ಯ ಘಟಕದಲ್ಲಿನ ಗೊಂದಲ– ನಾಯಕರಲ್ಲಿ ಎದ್ದಿರುವ ಅಸಮಾಧಾನದ ಬೆನ್ನಲ್ಲೇ, ಮುಂದಿನ ವಾರ ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪಕ್ಷದ ವರಿಷ್ಠರಿಂದ ಸೂಚನೆ ಬಂದಿದೆ ಎಂಬ ವದಂತಿ ರಾಜಕೀಯ ವಲಯದಲ್ಲಿ ಹಬ್ಬಿದೆ.
ಪಕ್ಷದಲ್ಲಿನ ರಾಜ್ಯದ ವಿದ್ಯಮಾನಗಳ ಬಗ್ಗೆ ವರದಿ ಪಡೆಯಲು ಉಸ್ತುವಾರಿ ಅರುಣ್ ಸಿಂಗ್ ಅವರನ್ನು ವರಿಷ್ಠರು ಕಳಿಸಿದ್ದರು. ‘ಯಾವುದೇ ಭಿನ್ನಮತ ಇಲ್ಲ, ಅಶಿಸ್ತು ಸಹಿಸುವುದಿಲ್ಲ. ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ’ ಎಂದು ಸಿಂಗ್ ಪದೇ ಪದೇ ಹೇಳಿದ್ದರು.
‘ರಾಜ್ಯದಲ್ಲಿ ಸಿಂಗ್ ವಾಸ್ತವ್ಯ ಹೂಡಿದ್ದಾಗಲೇ ಸುದ್ಧಿಗೋಷ್ಠಿ ನಡೆಸಿದ್ದ ಎಚ್. ವಿಶ್ವನಾಥ್, ಮುಖ್ಯಮಂತ್ರಿ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು.ಮತ್ತೊಬ್ಬ ಶಾಸಕ ಅರವಿಂದ ಬೆಲ್ಲದ ತಮ್ಮ ದೂರವಾಣಿ ಕದ್ದಾಲಿಕೆ ಆಗುತ್ತಿದೆ ಎಂದಿದ್ದರು. ಬಹುತೇಕ ಶಾಸಕರು ಅರುಣ್ ಸಿಂಗ್ ಭೇಟಿ ಮಾಡುವ ಗೋಜಿಗೆ ಹೋಗಿಲ್ಲ. ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಇವೇ ಸಾಕ್ಷಿಯಾಗಿವೆ. ಈ ಎಲ್ಲ ಬೆಳವಣಿಗೆಗಳ ಮಾಹಿತಿ ಪಡೆದಿರುವ ವರಿಷ್ಠರು ನವದೆಹಲಿಗೆ ಬರುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ’ ಎಂಬ ಮಾತುಗಳು ಬಿಜೆಪಿಯಲ್ಲಿ ಹರಿದಾಡುತ್ತಿವೆ. ಯಡಿಯೂರಪ್ಪ ಬಣ ಹಾಗೂ ಅವರ ವಿರೋಧಿ ಬಣ ಇದನ್ನು ಖಚಿತ ಪಡಿಸಿಲ್ಲ.
ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಜತೆ ಬಿಎಸ್‌ವೈ ಸಂವಾದ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇಂದು ಬೆಳಿಗ್ಗೆ ನಡೆಸಲಿರುವ ವಿಡಿಯೊ ಸಂವಾದದಲ್ಲಿ ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ.
ಕೋವಿಡ್ ನಿರ್ವಹಣೆ,ನಿಗ್ರಹದ ವಿಷಯದಲ್ಲಿ ಸರ್ಕಾರ ಕೈಗೊಂಡ ಕ್ರಮಗಳು,ಪರಿಹಾರದ ಪ್ಯಾಕೇಜ್‌ಗಳ ಕುರಿತು ಬಿಜೆಪಿ ಅಧಿಕಾರ ದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡ್ಡಾ ಸಂವಾದ ನಡೆಸುತ್ತಿದ್ದು, ಅದರ ಭಾಗವಾಗಿ ಸಂವಾದ ನಡೆಯಲಿದೆ ಎಂದು ಮೂಲಗಳು ಹೇಳಿವೆ.