| ಉಡುಪಿ ಜೂ.19(ಉಡುಪಿ ಟೈಮ್ಸ್ ವರದಿ): ಉದ್ಯಾವರದ ಪಿತ್ರೋಡಿಯಲ್ಲಿ ನಡೆದ ಮಹಿಳೆ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಬರೆದಿಟ್ಟಿದ್ದರೆನ್ನಲಾದ ಡೆತ್ ನೋಟ್ ಲಭ್ಯವಾಗಿದೆ. ಅದರಂತೆ ಮಹಿಳೆಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಡಿಯಲ್ಲಿ ಭಜನೆ ಕಲಿಸುತ್ತಿದ್ದ ವ್ಯಕ್ತಿ ಹಾಗೂ ಇಬ್ಬರು ಮಹಿಳೆ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಜೂ.17 ರಂದು ಪಿತ್ರೋಡಿ ನಿವಾಸಿ ದಿ.ಹೇಮಂತ್ ತಿಂಗಳಾಯ ಎಂಬವರ ಪತ್ನಿ ಸುಕನ್ಯಾ (55) ಅವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಪುತ್ರ ಉದ್ಯಾವರ ಗ್ರಾಮ ಪಂಚಾಯಿತಿ ಸದಸ್ಯ ಚೇತನ್ ಕುಮಾರ್ ನೀಡಿದ್ದ ದೂರಿನಂತೆ ಕಾಪು ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು.
ಆದರೆ ಮರುದಿನ ಅಂದರೆ ಜೂ.18ರ ಬೆಳಗ್ಗೆ ಮೃತ ಸುಕನ್ಯಾ ಅವರ ಮಗಳು ಸುಮನಾ ಅವರು ತಾಯಿಯ ಕೋಣೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಅವರ ಪರ್ಸಿನಲ್ಲಿ ಸುಕನ್ಯ ಅವರು ಬರೆದಿದ್ದರು ಎನ್ನಲಾದ ಡೆತ್ ನೋಟ್ ಸಿಕ್ಕಿದೆ ಎಂದು ಹೇಳಲಾಗಿದೆ. ಅದರಂತೆ ಈ ಡೆತ್ ನೋಟ್ ನಲ್ಲಿ ಮಹಿಳೆ ಸ್ಥಳೀಯ ಭಜನಾ ಮಂದಿರಕ್ಕೆ ಪ್ರತಿ ಶನಿವಾರ ಭಜನೆ ಮಾಡಲು ಹೋಗುತ್ತಿದ್ದು, ಭಜನೆ ಹೇಳಿ ಕೊಡುತ್ತಿದ್ದವರು ಹಾಗೂ ಭಜನೆ ಕಲಿಯುತ್ತಿದ್ದ ಇಬ್ಬರು ಮಹಿಳೆಯರು ಯಾವುದೋ ವಿಷಯದಲ್ಲಿ ತಕರಾರು ತೆಗೆದು ಸಾಯಲು ಪ್ರಚೋದನೆ ನೀಡಿರುವುದಾಗಿ ಬರೆದಿದೆ ಎನ್ನಲಾಗಿದೆ. ಇದೀಗ ಈ ಡೆತ್ ನೋಟ್ ಆಧಾರದಲ್ಲಿ ಮೃತರ ಮಗ ಚೇತನ್ ಪೊಲೀಸರಿಗೆ ಮರು ದೂರು ನೀಡಿದ್ದು, ಅದರಂತೆ ಮೂವರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
| |