ಶಂಕರನಾರಾಯಣ: ಯಡಮೊಗೆಯಲ್ಲಿ ಕೊಲೆಯಾದ ಉದಯ ಗಾಣಿಗ ಅವರ ಕುಟುಂಬವನ್ನು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) ಉಡುಪಿ ಜಿಲ್ಲಾ ಇದರ ಸತ್ಯ ಶೋಧನಾ ನಿಯೋಗವು ಭೇಟಿಯಾಗಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಲೆ ಹಾಕಲಾಯಿತು.
ಈ ಸಂಬಂಧ ಪ್ರತಿಕ್ರಿಯಿಸಿರುವ ಎಪಿಸಿಆರ್ ಜಿಲ್ಲಾ ಹೊಣೆಗಾರರಾದ ಹುಸೇನ್ ಕೋಡಿಬೆಂಗ್ರೆ, ಕೊಲೆಯಾದ ಉದಯ ಗಾಣಿಗ ಅವರ ಮನೆಗೆ ತೆರಳಿ ಪತ್ನಿ ಜ್ಯೋತಿ ಮತ್ತು ಕುಟುಂಬ ಸದಸ್ಯರಿಂದ ಘಟನೆಯ ಕುರಿತಾದ ಪ್ರಮುಖ ಮಾಹಿತಿ ಗಳನ್ನು ಸಂಗ್ರಹಿಸಲಾಗಿದೆ. ಸ್ಥಳೀಯರಿಂದಲೂ ಈ ಕೊಲೆ ಪ್ರಕರಣದ ಹಲವು ಸಂಗತಿಗಳನ್ನು ಸಂಗ್ರಹಿಸಲಾಗಿದ್ದು, ಶೀಘ್ರದಲ್ಲಿ ನಮ್ಮ ಸತ್ಯ ಶೋಧನ ತಂಡ ವರದಿಯೊಂದನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿ ನ್ಯಾಯಾಕ್ಕಾಗಿ ಆಗ್ರಹಿಸಲಿದೆ. ಈ ಪ್ರಕರಣದಲ್ಲಿ ಸ್ಥಳೀಯ ಪ್ರಭಾವಿ ರಾಜಕಾರಣಿಗಳಾದ ಪ್ರಾಣೇಶ್ ಯಾಡಿಯಾಳ ಸೇರಿದಂತೆ ಹಲವಾರು ಮಂದಿ ಭಾಗಿಯಾಗಿದ್ದು ತನಿಖೆಯ ದಿಕ್ಕು ತಪ್ಪದಂತೆ ಸಂಬಂಧ ಪಟ್ಟ ಆಯೋಗಗಳಿಗೂ ವರದಿ ಸಲ್ಲಿಸಿ ನ್ಯಾಯಯುತವಾದ ತನಿಖೆಗೆ ಆಗ್ರಹಿಸಲಿದ್ದೇವೆ.
ಈ ಪ್ರಕರಣದಲ್ಲಿ ಕೊಲೆಯಾದ ಉದಯ ಗಾಣಿಗ ಅವರು ಕುಟುಂಬದ ಏಕೈಕ ಅರ್ಥಿಕ ಆಧಾರ ಸ್ತಂಭವಾಗಿದ್ದರು. ಇದೀಗ ಅವರನ್ನು ಕಳೆದುಕೊಂಡ ಕುಟುಂಬಕ್ಕೆ ದೊಡ್ಡ ಅರ್ಥಿಕ ಹೊಡೆತವೂ ಬಿದ್ದಿದೆ. ಕುಟುಂಬಕ್ಕೆ ಸರಕಾರದ ವತಿಯಿಂದ ಕನಿಷ್ಠ 50 ಲಕ್ಷ ಪರಿಹಾರ ನೀಡಬೇಕಾಗಿದೆ. ಈ ಕುರಿತಂತೆ ಕಾನೂನಾತ್ಮಕ ಹೋರಾಟ ಮುಂದುವರಿಸಲಿದ್ದೇವೆ. ಅದರೊಂದಿಗೆ ಸರಕಾರಕ್ಕೂ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಲಿದ್ದೇವೆಂದರು. ಕುಟುಂಬಕ್ಕೆ ಸಾಂತ್ವನ ನೀಡಿದ್ದೇವೆ. ನ್ಯಾಯ ಸಿಗುವರೆಗೂ ಕುಟುಂಬದ ಹೋರಾಟದಲ್ಲಿ ಎಪಿಸಿಆರ್ ಭಾಗಿಯಾಗಲಿದೆ ಎಂದು ತಿಳಿಸಿದ್ದಾರೆ. ಮನೆಗೆ ಭೇಟಿಕೊಟ್ಟ ನಿಯೋಗದಲ್ಲಿ ಆನಂದ್ ಕಾರಂದೂರು, ಇದ್ರೀಸ್ ಹೂಡೆ, ಅಝೀಜ್ ಉದ್ಯಾವರ, ಪ್ರಸಾದ್ ಕಾಂಚನ್, ಎಡ್ವಕೇಟ್ ಯಾಸೀನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು. | | |