ಗಂಗೊಳ್ಳಿ: ನಿಯಮ ಉಲ್ಲಂಘಿಸಿ ಧ್ಯಾನ ಪ್ರಾರ್ಥನೆ, ಪ್ರವಚನ- 6 ಜನರ ಮೇಲೆ ಕೇಸ್ ದಾಖಲು
ಗಂಗೊಳ್ಳಿ ಜೂ.19(ಉಡುಪಿ ಟೈಮ್ಸ್ ವರದಿ): ಕೋವಿಡ್ ನಿಯಮ ಉಲ್ಲಂಘಿಸಿ ಧ್ಯಾನ ಕೇಂದ್ರದಲ್ಲಿ ಪ್ರಾರ್ಥನೆ ಮತ್ತು ಪ್ರವಚನ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿ ಕೊಂಡಿದ್ದಾರೆ.
ಈ ವಿಚಾರವಾಗಿ ಫ್ಲೈಯಿಂಗ್ ಸ್ಕ್ವಾಡ್ ಆಗಿರುವ ಪ್ರಭಾಕರ ಕುಲಾಲ್ ಅವರು ಜೂ.18 ರಂದು ಗಂಗೊಳ್ಳಿ ಪೇಟೆ ಪರಿಸರದಲ್ಲಿ ಸಂಚರಿಸುತ್ತಿದ್ದಾಗ, ಮೇಲ್ ಗಂಗೊಳ್ಳಿ ನೀರು ಟ್ಯಾಂಕ್ ಬಳಿ ಅಹಲ್ಲಾದೀಸ್ ಧ್ಯಾನ ಕೇಂದ್ರದಲ್ಲಿ ಜನರು ಗುಂಪು ಸೇರಿ ಪ್ರಾರ್ಥನೆ ಮತ್ತು ಪ್ರವಚನ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆ ಗಂಗೊಳ್ಳಿ ಠಾಣಾ ಪಿ.ಎಸ್.ಐ ಮತ್ತು ಗಂಗೊಳ್ಳಿ ಗ್ರಾಮ ಪಂಚಾಯತ್ ಪಿಡಿಓ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಧ್ಯಾನ ಕೇಂದ್ರದಲ್ಲಿ ಯಾವುದೇ ಅನುಮತಿ ಇಲ್ಲದೆ ಅಬ್ದುಲ್ ಅಜೀಜ್ (56), ಮಹಮ್ಮದ್ ಹಸನ್ (62), ಎಂ.ಹೆಚ್ ಜಾಹೀದ್ (62) ಅಬ್ದುಲ್ ಪಾಯೀಜ್ (25) ಮಹಮ್ಮದ್ ನಿಯಾಜ್ (51) ಅಬ್ದುಲ್ ಬಾಸೀತ್(18) ಎಂಬುವವರು ಧ್ವನಿವರ್ಧಕ ಅಳವಡಿಸಿಕೊಂಡು ಪ್ರಾರ್ಥನೆ/ಪ್ರವಚನ ಮಾಡುತ್ತಿದ್ದುದು ಕಂಡು ಬಂದಿದೆ. ಈ ವಿಚಾರವಾಗಿ ಕೋವಿಡ್ ಸಂದರ್ಭದಲ್ಲಿ ಯಾವುದೇ ಅನುಮತಿ ಇಲ್ಲದೆ ಪ್ರಾರ್ಥನೆ, ಪ್ರವಚನ ಮಾಡುವ ಮೂಲಕ ಕೋವಿಡ್ ನಿಯಮ ಹಾಗೂ ಸರಕಾರದ ಆದೇಶವನ್ನು ಉಲ್ಲಂಘಿಸಿರುವುದಾಗಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.