ಗೃಹಿಣಿಯರ ಬದುಕನ್ನೇ ದುಸ್ತರಗೊಳಿಸಿದ ಸರ್ಕಾರ: ಉಡುಪಿ ಮಹಿಳಾ ಕಾಂಗ್ರೆಸ್ ಆಕ್ರೋಶ
ಉಡುಪಿ: ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದ ಸರಕಾರಗಳು ಏಳು ವರ್ಷಗಳ ಹಿಂದೆ ಮತದಾರರಿಗೆ ಏನೆಲ್ಲಾ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದಿವೆಯೋ ಅವುಗಳನ್ನೆಲ್ಲಾ ಗಾಳಿಗೆ ತೂರಿ ತಮಾಷೆ ನೋಡುತ್ತಿವೆ .
ಇವರ ಆಡಳಿತದಲ್ಲಿ ಗೃಹಿಣಿಯರ ಬದುಕು ದುಸ್ತರವಾಗಿದೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಅಧಿಕಾರಕ್ಕೆ ಬರುವ ಮೊದಲು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಯುಪಿಎ ಸರಕಾರವು ಹೆಚ್ಚಿಸಿರುವುದುರಿಂದ ಗೃಹಿಣಿಯರು ದಿನ ದೂಡುವುದೇ ಕಷ್ಟವಾಗುತ್ತಿದೆ.ತರಕಾರಿಯ ಬೆಲೆ ಗಗನಕ್ಕೇರಿರುವುದರಿಂದ ಮನೆಯಲ್ಲಿ ಅಡುಗೆ ಮಾಡುವುದೇ ಕಷ್ಟವಾಗಿದೆ. ಎಂದೆಲ್ಲಾ ಬಿಂಬಿಸುವ ಮಹಿಳೆಯರು ಚಿತ್ರಗಳನ್ನು ಆಕರ್ಷಕ ಜಾಹೀರಾತುಗಳ ಮೂಲಕ ಟಿವಿ ಇನ್ನಿತರ ಮಾಧ್ಯಮಗಳಲ್ಲಿ ನೀಡುವುದರ ಮೂಲಕ ಯುಪಿಎ ಆಡಳಿತವನ್ನು ಕಿತ್ತೊಗೆದು ಬಿಜೆಪಿಯನ್ನು ಅಧಿಕಾರಕ್ಕೆ ತಂದಲ್ಲಿ ನಾವು ತಮ್ಮ ಬದುಕನ್ನೇ ಬದಲಾಯಿಸುತ್ತೇವೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಸುತ್ತೇವೆ.ಇನ್ನು ಗೃಹಿಣಿಯರು ಕಣ್ಣೀರು ಸುರಿಸಿದ್ದು ಸಾಕು” ಎಂದೆಲ್ಲಾ ನಾಟಕೀಯ ಆಶ್ವಾಸನೆಗಳನ್ನು ನೀಡಿ,ಮತದಾದರರೆದುರು ಮೊಸಳೆ ಕಣ್ಣೀರನ್ನು ಸುರಿಸುವುದರ ಮೂಲಕ ಅಧಿಕಾರದ ಗದ್ದುಗೆ ಏರಿದ ಬಿಜೆಪಿ ಇಂದು ಮಾಡುತ್ತಿರುವುದೇನು?
ನಿರಂತರವಾಗಿ ಇಂಧನ ಬೆಲೆಗಳನ್ನು ಏರಿಸುವ ಮೂಲಕ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಗಗನಕ್ಕೇರಿಸಿದೆ.ತರಕಾರಿಗಳ ಬೆಲೆಗಳು ಜನಸಾಮಾನ್ಯರ ಅಂಕೆಗೂ ನಿಲುಕದಷ್ಟು ಮಿತಿ ಮೀರುತ್ತಿದೆ.ಬೇಳೆಕಾಳುಗಳ ಬೆಲೆ ಮೂರಂಕಿಗೆ ತಲುಪಿದೆ.ಎಲ್ಲಕ್ಕಿಂತಲೂ ಅಧಿಕವಾಗಿ ಬೆಲೆ ಏರಿಸಿರುವುದು ಅಡುಗೆ ಎಣ್ಣೆಗೆ.ಗೃಹಿಣಿಯರು ಪ್ರತೀದಿನ,ಪ್ರತೀಕ್ಷಣ ಬಳಸುವಂತಹ ಅಡುಗೆ ಎಣ್ಣೆಯ ಬೆಲೆಯನ್ನು ನಿರಂತರವಾಗಿ ಏರಿಸುತ್ತಿರುವ ಸರ್ಕಾರಕ್ಕೆ ಗೃಹಿಣಿಯರ ಕಷ್ಟದ ಅರಿವಿಲ್ಲವೇ? ಎಂದು ಮಹಿಳಾ ಕಾಂಗ್ರೆಸ್ ಪ್ರಶ್ನಿಸಿದೆ. ದೇಶದ ಭರವಸೆಯ ನಾಯಕ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಅವರ ಜನ್ಮದಿನವಾದ ಜೂನ್ 19ರಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಈ ಅಡುಗೆ ಎಣ್ಣೆಯ ಬೆಲೆಯನ್ನು ಸರಕಾರವು ಯದ್ವಾತದ್ವಾ ಏರಿಸುತ್ತಿರುವುದನ್ನು ವಿರೋಧಿಸಿ ಕೆಲವು ಬಡ ಮಹಿಳೆಯರಿಗೆ ಅಡುಗೆ ಎಣ್ಣೆಯನ್ನು ವಿತರಿಸುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
ಇದರ ಜೊತೆಗೇ ಈ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸುತ್ತಿರುವ ಬಡ ಕುಟುಂಬದ ಗೃಹಿಣಿಯರಿಗೆ ಅಡುಗೆ ಎಣ್ಣೆಯನ್ನು ನೀಡಿ ಸಹಕರಿಸುವ ಉತ್ತಮ ಉದ್ದೇಶವೂ ನಮ್ಮದಾಗಿದೆ ಎಂಬುದಾಗಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಹೇಳಿದ್ದಾರೆ.