ಶಿರ್ವ: ಧರ್ಮಸಾಮರಸ್ಯದ ಸಂದೇಶ ಸಾರಿದ ಸಾಮಾಜಿಕ ಕಾರ್ಯಕರ್ತ ಸುನೀಲ್ ಕಬ್ರಾಲ್ ಅಂತ್ಯಕ್ರಿಯೆ
ಉಡುಪಿ ಜೂ.18(ಉಡುಪಿ ಟೈಮ್ಸ್ ವರದಿ): ಇಂದು ವಿಧಿವಶರಾದ ಸಾಮಾಜಿಕ ಕಾರ್ಯಕರ್ತ ಹಾಗೂ ಇಂಡಿಯನ್ ಕ್ರಿಶ್ಚಿಯನ್ ಯೂನಿಯನ್ ನ ಸ್ಥಾಪಕ ಅಧ್ಯಕ್ಷ ಸುನೀಲ್ ಕಬ್ರಾಲ್ ಅವರ ಅಂತ್ಯಕ್ರಿಯೆಯು ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಕೋವಿಡ್ ನಿಯಮಗಳೊಂದಿಗೆ ನಡೆಯಿತು.
ಅಂತಿಮ ವಿಧಿವಿಧಾನಗಳನ್ನು ಶಿರ್ವ ದೇವಾಲಯದ ಪ್ರಧಾನ ಧರ್ಮಗುರು ವಂ. ಫಾ. ಡೆನ್ನಿಸ್ ಡೇಸಾ ನಡೆಸಿದರು. ಉಡುಪಿ ಜಿಲ್ಲಾ ಎನ್.ಎಸ್.ಯು.ಐ. ಅಧ್ಯಕ್ಷ ಸೌರಭ್ ಬಳ್ಳಾಲ್ ಹಾಗೂ ಕಾಂಗ್ರೆಸ್ ಜಿಲ್ಲಾ ವಕ್ತಾರ ಕೃಷ್ಣಮೂರ್ತಿ ಆಚಾರ್ಯ ಅವರ ನೇತೃತ್ವದಲ್ಲಿ ಶಿರ್ವ ಚರ್ಚ್ ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಇಂದು ನಡೆದ ಇವರ ಅಂತ್ಯಕ್ರಿಯೆಯು ಜಾತಿ, ಧರ್ಮ ಭೇಧವಿಲ್ಲದೆ ಹಿಂದೂ ಹಾಗೂ ಕ್ರಿಶ್ಚಿಯನ್ ನ ಬಂಧುಗಳು ಭಾಗವಹಿಸುವ ಮೂಲಕ ಧರ್ಮಸಾಮರಸ್ಯದ ಸಂದೇಶ ಸಾರಿದೆ. ಕೋವಿಡ್ ನಿಯಮಗಳ ಪ್ರಕಾರ ಸಾರ್ವಜನಿಕರಿಗೆ ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಲು ಅವಕಾಶ ಇರಲಿಲ್ಲ. 10 ನಿ. ಸಾರ್ವಜನಿಕರಿಗೆ ಚರ್ಚ್ ವಠಾರದಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿತ್ತು.
ವಿವಿಧ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸುನೀಲ್ ಕಬ್ರಾಲ್ ಅವರ ಅಂತ್ಯಕ್ರಿಯೆಯಲ್ಲಿ ಸಹಕರಿಸಿದ ಸೌರಭ್ ಬಳ್ಳಾಲ್ ಹಾಗೂ ಕೃಷ್ಣಮೂರ್ತಿ ಆಚಾರ್ಯ ನೇತೃತ್ವದ ತಂಡಕ್ಕೆ ಕುಟುಂಬ ಆಭಾರಿಯಾಗಿದೆ. ಕಳೆದ ಕೆಲದಿನಗಳ ಹಿಂದೆ ಸುನಿಲ್ ಕಬ್ರಾಲ್ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂದರ್ಬದಲ್ಲಿ ಚಿಕಿತ್ಸೆಗೆ ಸಂಬಂಧಿಸಿದಂತೆ ವಿಶೇಷ ಮುತುವರ್ಜಿ ವಹಿಸಿದ್ದ ಹಾಗೂ ಇಂದು ಶ್ರೀಯುತರು ಮೃತರಾದ ಸಂದರ್ಭದಲ್ಲಿ ಮನೆಯವರೊಂದಿಗೆ ಇದ್ದು ಧೈರ್ಯ ತುಂಬಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮತ್ತು ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ ವಿವಿಧ ರಾಜಕೀಯ ಮುಖಂಡರುಗಳಿಗೆ,ಕುಟುಂಬ ಸದಸ್ಯರಿಗೆ ಇಂಡಿಯನ್ ಕ್ರಿಶ್ಚಿಯನ್ ಯೂನಿಯನ್ ವತಿಯಿಂದ ಹಾಗೂ ಮೃತರ ಕುಟುಂಬದ ಕಡೆಯಿಂದ ಕೃತಜ್ಞತೆ ಸಲ್ಲಿಸಿರುವುದಾಗಿ ‘ಐಸಿಯು’ ಗೌರವಾಧ್ಯಕ್ಷ ರೊನಾಲ್ಡ್ ಮನೋಹರ್ ಕರ್ಕಡ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ, ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಮೈಕಲ್ ಡಿಸೋಜಾ, ಪ್ರಮುಖರಾದ ವಿಲ್ಸನ್ ಡಿಸೋಜ, ಚಾರ್ಲ್ಸ್ ಆಂಬ್ಲರ್, ರತನ್ ಶೆಟ್ಟಿ ಮತ್ತಿತರರು ಅಂತಿಮ ದರ್ಶನ ಪಡೆದರು.