ತುಳುವರ ಬಾವುಟಕ್ಕೆ ಅವಮಾನಿಸಿ ಚಪ್ಪಲಿ ಪೋಸ್ಟ್: ಬೆಂಗಳೂರಿನ ಆರೋಪಿ ಬಂಧನ

ಮಂಗಳೂರು, ಜೂನ್ 18: ತುಳುನಾಡಿನ ಬಾವುಟವನ್ನು ಚಪ್ಪಲಿಯ ಬಣ್ಣಕ್ಕೆ ಹೊಂದಿಕೆಯಾಗುವಂತೆ ಎಡಿಟ್ ಮಾಡಿ, ಫೇಸ್ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದ ಪ್ರಕರಣದಲ್ಲಿ ಬರ್ಕೆ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಸೂರ್ಯ ಪಾದರಕ್ಷೆಯಲ್ಲಿ ತುಳುನಾಡಿನ ಧ್ವಜದ ಚಿತ್ರ ಬಿಡಿಸಿ ತುಳುಭಾಷೆಗೆ, ತುಳುನಾಡಿಗೆ ಅವಮಾನ ಎಸಗಿದ್ದ. ಚಪ್ಪಲಿಯಲ್ಲಿ ತುಳು ಧ್ವಜ ಬಳಸಿ ಎಡಿಟ್ ಮಾಡಿದ್ದ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸೂರ್ಯ ಎಂಬ ಹೆಸರಿನಲ್ಲಿ ಪೋಸ್ಟ್ ಮಾಡಿದ್ದ. ಆ ಮೂಲಕ ತುಳು ಭಾಷೆಗೆ ಅವಮಾನ ಮಾಡಿದ್ದ. ಇದರ ವಿರುದ್ಧ ತುಳುನಾಡಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಪೊಲೀಸ್ ತಂಡ ಬೆಂಗಳೂರಿಗೆ ತೆರಳಿ, ಆರೋಪಿಯ ಮನೆಯನ್ನು ಪತ್ತೆ ಮಾಡಿದೆ. ಆರೋಪಿ ಸೂರ್ಯ ಎನ್.ಕೆ. ಶ್ರೀರಾಂಪುರದಲ್ಲಿ ಒಂದನೇ ಕ್ರಾಸ್ ನಿವಾಸಿಯಾಗಿದ್ದನ್ನು ಪತ್ತೆ ಮಾಡಿ, ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಯನ್ನು ಇಂದು ಮಂಗಳೂರಿಗೆ ಕರೆತಂದು ಕೋರ್ಟಿಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ತುಳುವರು ಕಳೆದ ಭಾನುವಾರ ಟ್ವಿಟರ್ ನಲ್ಲಿ ಅಭಿಯಾನ ನಡೆಸಿದ್ದು, ತುಳು ಭಾಷೆಗೆ ರಾಜ್ಯ ಭಾಷೆಯ ಮಾನ್ಯತೆ ನೀಡುವಂತೆ ಒತ್ತಾಯ ಮಾಡಿದ್ದರು. ಈ ವೇಳೆ, ಸಾಮಾಜಿಕ ಜಾಲತಾಣದಲ್ಲಿ ತುಳು ಟ್ವೀಟ್ ಭಾರೀ ಟ್ರೆಂಡ್ ಆಗಿತ್ತು. ಇದೇ ವೇಳೆ, ಸೂರ್ಯ ತುಳುವರನ್ನು ಕೆರಳಿಸುವುದಕ್ಕಾಗಿ ತುಳು ಬಾವುಟವನ್ನು ಚಪ್ಪಲಿಗೆ ಹೊಂದಿಸಿ, ಪೋಸ್ಟ್ ಮಾಡಿದ್ದಲ್ಲದೆ, ಇವತ್ತು ತುಳುನಾಡ್ ಚಪ್ಪಲಿ ಬಂದಿದೆ, ನಾಳೆ ಬಿಕಿನಿಯೂ ಬರಬಹುದು, ಹಾಕಿಕೊಂಡು ಮಜಾ ಮಾಡಿ ಎಂದು ಬರೆದು ತುಳು ಭಾಷಿಕರ ಭಾವನೆಗೆ ಘಾಸಿಗೊಳಿಸುವ ಕೆಲಸ ಮಾಡಿದ್ದ. ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!