ಬಿಜೆಪಿ ಸೇವಾ ಕಾರ್ಯಗಳೇ ವಿರೋಧಿಗಳ ಟೀಕೆಗೆ ಉತ್ತರ: ಕುಯಿಲಾಡಿ ಸುರೇಶ್
ಉಡುಪಿ : ಕೋವಿಡ್ ಸಂಕಷ್ಟದಲ್ಲಿರುವ ಜನತೆಗೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ರೂ. 1,250 ಕೋಟಿ ಮತ್ತು ರೂ. 500 ಕೋಟಿಗಳ ಎರಡು ಪ್ಯಾಕೇಜ್‌ಗಳ ಘೋಷಣೆಯ ಜೊತೆಗೆ ಕೋವಿಡ್‌ನಿಂದ ಮೃತಪಟ್ಟ ಸದಸ್ಯರ ಬಡ ಕುಟುಂಬಕ್ಕೆ ತಲಾ ರೂ.1ಲಕ್ಷ ಪರಿಹಾರ ನೀಡುವ ಬಗ್ಗೆ ರೂ.300 ಕೋಟಿಗಳನ್ನು ಮಂಜೂರು ಮಾಡಿರುವುದು ಸ್ವಾಗತಾರ್ಹ. ಬಿಜೆಪಿ ಸೇವಾ ಕಾರ್ಯಗಳೇ ವಿರೋಧ ಪಕ್ಷಗಳ ಟೀಕೆಗಳಿಗೆ ಸಮರ್ಪಕವಾದ ಉತ್ತರ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಅವರು ಸೇವಾ ಹೀ ಸಂಘಟನ್ ತತ್ವದಡಿ ಕಾರ್ಯಾಚರಿಸುತ್ತಿರುವ ಬಿಜೆಪಿ ಉಡುಪಿ ಜಿಲ್ಲಾ ಮತ್ತು ಆರು ಮಂಡಲಗಳ ಕೋವಿಡ್ ಸಹಾಯವಾಣಿಯ ಪ್ರಗತಿ ಪರಿಶೀಲನಾ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ಬಿಜೆಪಿಯ ಸೂಚನೆಯ ಮೇರೆಗೆ ಸೇವಾ ಹೀ ಸಂಘಟನ್ ಧ್ಯೇಯ ವಾಕ್ಯದಡಿ ಉಡುಪಿ ಜಿಲ್ಲಾ ಬಿಜೆಪಿ ಮತ್ತು ಉಡುಪಿ ನಗರ, ಉಡುಪಿ ಗ್ರಾಮಾಂತರ, ಕಾರ್ಕಳ, ಕಾಪು, ಕುಂದಾಪುರ, ಬೈಂದೂರು ಮಂಡಲಗಳ ವ್ಯಾಪ್ತಿಯಲ್ಲಿ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಕೋವಿಡ್ ಸಂಕಷ್ಟದಲ್ಲಿರುವ ಜನತೆಗೆ ಸಹಾಯ ಹಸ್ತವನ್ನು ಚಾಚುವ ಮೂಲಕ ವಿವಿಧ ರೀತಿಯಲ್ಲಿ ಅಮೂಲ್ಯ ಸೇವೆಗಳನ್ನು ಸಲ್ಲಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಚತುಷ್ಪಥ ರಸ್ತೆ ನಿರ್ಮಾಣದ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸಾಕಾರಗೊಳಿಸುತ್ತಿದೆ. ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ಉನ್ನತೀಕರಣದ ಕಾಮಗಾರಿ ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ರಾಜ್ಯದಲ್ಲಿ ಗಣನೀಯ ಪ್ರಮಾಣದ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಪ್ರಸಕ್ತ ಉಡುಪಿ ಜಿಲ್ಲೆಯ ಹೆಬ್ರಿ ಯಿಂದ ಪರ್ಕಳ ತನಕದ 29.1ಕಿ.ಮೀ ರಸ್ತೆ ಹಾಗೂ ಆದಿವುಡುಪಿ ಕರಾವಳಿ ಜಂಕ್ಷನ್‌ನಿಂದ ಮಲ್ಪೆ ಮೀನುಗಾರಿಕಾ ಬಂದರನ್ನು ಬೆಸೆಯುವ 37ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಿ ಚತುಷ್ಪಥಗೊಳಿಸಲು ಒಟ್ಟು ರೂ.350 ಕೋಟಿಗಳು ಮತ್ತು ಮಾನ್ಸೂನ್ ಕಾಲದಲ್ಲಿ ಮುಳುಗಡೆಯಾಗುವ ಸೀತಾನದಿ ಪ್ರದೇಶ ಹಾಗೂ ನೆಮ್ಮಾರು ಬಳಿಯ ರಸ್ತೆಯನ್ನು ಎತ್ತರಿಸಿ, ಅಗತ್ಯದ ತಡೆಗೋಡೆ ನಿರ್ಮಾಣಕ್ಕೆ ರೂ.19 ಕೋಟಿಗಳನ್ನು ಕೇಂದ್ರ ಸರಕಾರ ಮೀಸಲಿರಿಸುವ ಜೊತೆಗೆ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಯಲ್ಲಿ ಓವರ್ ಪಾಸ್ ನಿರ್ಮಾಣಕ್ಕೆ ರೂ.22.72 ಕೋಟಿಗಳ ಅನುಮೋದನೆ ನೀಡಿದ ಕೇಂದ್ರ ಸರಕಾರದ ಕ್ರಮ ಪ್ರಶಂಸನೀಯ. ಈಪ್ರಮುಖ ಕಾಮಗಾರಿಗಳಿಗೆ ಶಿಫಾರಸು ಮಾಡಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರ ಸಾಧನೆ ಅಭಿನಂದನೀಯ.
ವಿರೋಧ ಪಕ್ಷಗಳು ಅಪಪ್ರಚಾರವನ್ನೇ ಕಾಯಕವನ್ನಾಗಿಸಿಕೊಂಡಿರುವ ಈ ಸನ್ನಿವೇಶದಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ ಬಿಜೆಪಿ ಅಭಿವೃದ್ಧಿಯ ಸ್ಪಷ್ಟ ಗುರಿಯೊಂದಿಗೆ ಮುನ್ನಡೆಯುತ್ತಿದೆ ಎಂದು ಕುಯಿಲಾಡಿ ಹೇಳಿದ್ದಾರೆ.