ಉಡುಪಿ: ಟೂಲ್ ಕಿಟ್ ಹೇಳಿಕೆ ಸುಳ್ಳನ್ನು ಪ್ರತಿಪಾದನೆ ಮಾಡುವುದೇ ಬಿಜೆಪಿ ಬಂಡವಾಳ
ಉಡುಪಿ: ಕೊರೊನಾ ಎರಡನೇ ಅಲೆಯ ಪರಿಣಾಮವನ್ನು ತಜ್ಞರು ಮೊದಲೇ ತಿಳಿಸಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗಂಭೀರವಾಗಿ ಪರಿಗಣಿಸಿಲ್ಲ. ಇದರಿಂದಾಗಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಯಿತು. ಸೋಂಕು ಉಲ್ಬಣಕ್ಕೆ ಚುನಾವಣಾ ರ್‍ಯಾಲಿ ಹಾಗೂ ಕುಂಭ ಮೇಳವೇ ಕಾರಣ ಎಂಬುದು ಈಗಾಗಲೇ ದೃಡಪಟ್ಟಿದೆ.
ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರವು ತನ್ನ ವೈಫಲ್ಯವನ್ನು ಮರೆಮಾಚಲು ಟೂಲ್‌ಕಿಟ್ ಹೆಸರಲ್ಲಿ ಆರೋಪ ಹೊರಿಸಿ ಕಾಂಗ್ರೆಸನ್ನು ಹಣಿಯಲು ಪ್ರಯತ್ನಪಟ್ಟು ವೈಫಲ್ಯಗೊಂಡಿದೆ. ಟ್ವಿಟರ್ ಈಗಾಗಲೇ ಆ ಟೂಲ್‌ಕಿಟ್ ಅಸಲಿಯಲ್ಲ ಅದೊಂದು ತಿರುಚಲಾದ ಸುಳ್ಳು ಸುದ್ದಿ ಎಂದು ಸ್ಪಷ್ಟ ಪಡಿಸಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಲೆಟರ್ ಹೆಡ್ ಮಾರ್ಪಡಿಸಿ ಟೂಲ್‌ಕಿಟ್ ಒಂದನ್ನು ಸೃಷ್ಟಿಸಿದ ಆರೋಪದ ಮೇರೆಗೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಮಣ್ ಸಿಂಗ್ ಮತ್ತು ವಕ್ತಾರ ಸಂಬಿತ್ ಪಾತ್ರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ. ಇಷ್ಟಿದ್ದೂ ಬಿಜೆಪಿ ಜಿಲ್ಲಾ ನಾಯಕರು ಟೂಲ್‌ಕಿಟ್ ಜಪ ಮಾಡುತ್ತಿರುವುದು ನಾಚಿಕೆಗೇಡು.
ಯು.ಪಿ.ಎ. ಸರಕಾರದ ಅವಧಿ ಕಚ್ಚಾತೈಲ ಬೆಲೆ ಪ್ರತೀ ಬ್ಯಾರಲ್‌ಗೆ 140-150 ಇದ್ದಾಗ ಪೆಟ್ರೋಲ್ ಬೆಲೆ 83 ರೂಪಾಯಿ ಇತ್ತು. ಆದರೆ ಈಗ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ59.35 ಡಾಲರ್ ಇದ್ದು ಪೆಟ್ರೋಲ್ ಬೆಲೆ 100 ರೂಪಾಯಿಗೆ ನೆಗೆದಿದೆ. 2014ರಲ್ಲಿ ಕೇಂದ್ರ ಸರಕಾರದ ತೆರಿಗೆ ರೂ. 9.48 ಇದ್ದರೆ 2021ರಲ್ಲಿ 31.83 ರೂಪಾಯಿಗೆ ಏರಿಕೆ ಕಂಡಿದೆ. ಇದರಿಂದ ಪೆಟ್ರೋಲ್ ಬೆಲೆ ಹೆಚ್ಚಳ ಎಂಬುದು ಸರಕಾರದ ತೆರಿಗೆ ಮೂಲಕ ಹೊರತು ಪೆಟ್ರೋಲ್ ಉತ್ಪಾದನೆ ವೆಚ್ಚದ ಏರಿಕೆಯಿಂದ ಅಲ್ಲ ಎಂಬುದು ಸ್ಪಷ್ಟ.
ಯು.ಪಿ.ಎ. ಆಡಳಿತಾವಧಿಯಲ್ಲಿ ತೈಲ ಬೆಲೆ 10 ಪೈಸೆ ಏರಿಕೆ ಕಂಡಾಗ ಬೀದಿಯಲ್ಲಿ ನಿಂತು ರಂಪ ಮಾಡಿದವರು ಇಂದು ಮೌನಕ್ಕೆ ಶರಣಾಗಿದ್ದಾರೆ. ಬಿಜೆಪಿ ಅಧಿಕಾರ ಪಡೆದ ಕೂಡಲೇ ಜನರ ಸಂಕಷ್ಟಕ್ಕೆ ಸ್ಪಂದಿಸುವ ಗುಣವನ್ನೂ ಕಳೆದುಕೊಂಡಿದೆ. ಈ ಹಿಂದೆ ತೈಲಬೆಲೆ ಏರಿಕೆಗೆ ಪ್ರತಿಭಟಿಸುತ್ತಿದ್ದುದು ಅಧಿಕಾರ ಪಡೆಯಲು, ಮತ್ತು ಆಡಳಿತ ವೈಫಲ್ಯಗಳನ್ನು ಮರೆಮಾಚಲು ಬಿಜೆಪಿ ಸದಾ ಪಾಕಿಸ್ತಾನ ಜಪ ಮಾಡುತ್ತದೆ. ಇದರ ಹಿಂದೆ ಜನರ ದಿಕ್ಕು ತಪ್ಪಿಸುವ ಹುನ್ನಾರವಿದೆ, ಕೊರೋನಾ ಸಂಕಷ್ಟ ಕಾಲದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ಬದಲು ನಾಯಕತ್ವ ಬದಲಾವಣೆಗಾಗಿ ಬಿಜೆಪಿಯಲ್ಲಿ ಆಂತರಿಕ ಕಲಹ ತಾರಕಕ್ಕೆ ಏರಿರುವುದು ನಾಚಿಕೆಗೇಡು. ಬಿನ್ನಮತ ಕೊನೆ ಗೊಳಿಸಲಾಗದ ಬಿಜೆಪಿ ಕೊರೊನಾ ಕೊನೆಗೊಳಿಸುವುದೇ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಟೂಲ್‌ಕಿಟ್ ಬಗ್ಗೆ ಜಿಲ್ಲಾ ಬಿಜೆಪಿ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.