ಸ್ವಿಸ್ ಬ್ಯಾಂಕ್: 13 ವರ್ಷಗಳಲ್ಲೇ ಗರಿಷ್ಠ ಮೊತ್ತದ ಭಾರತೀಯರ ಠೇವಣಿ ಜಮೆ!
ನವದೆಹಲಿ/ಜ್ಯೂರಿಚ್ ಜೂ.18: ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರು ವೈಯಕ್ತಿಕವಾಗಿ ಮತ್ತು ಬೇರೆ ಬೇರೆ ಹಣಕಾಸು ಸಂಸ್ಥೆಗಳ ಮೂಲಕ ಇಟ್ಟಿರುವ ಠೇವಣಿ ಮೌಲ್ಯ 20,700 ಕೋಟಿಗೆ ಜಿಗಿದಿದೆ. ಆದರೆ,13 ವರ್ಷಗಳಲ್ಲೇ ಇದು ಗರಿಷ್ಠ ಮೊತ್ತವಾಗಿದ್ದರೂ ವೈಯಕ್ತಿಕ ಹಣ ಠೇವಣಿಯಲ್ಲಿ ಇಳಿಕೆಯಾಗಿದೆ ಎಂದು ಸ್ವಿಜರ್ಲೆಂಡ್ ಕೇಂದ್ರೀಯ ಬ್ಯಾಂಕ್ ಹೇಳಿದೆ.
ಬ್ಯಾಂಕ್ 2020ರ ವಾರ್ಷಿಕ ವರದಿಯಲ್ಲಿ ಮಾಹಿತಿ ನೀಡಿದ್ದು, ಅದರ ಪ್ರಕಾರ ಸೆಕ್ಯೂರೀಟಿಸ್ ಮತ್ತು ಅದೇ ರೀತಿಯ ಇತರ ಮಾದರಿಯ ಹೂಡಿಕೆಯಿಂದಾಗಿ ಈ ಮೊತ್ತ ಏರಿಕೆಯಾಗಿದೆ. ಭಾರತದಲ್ಲಿನ ಸ್ವಿಜರ್ಲೆಂಡ್ ಬ್ಯಾಂಕಿನಲ್ಲಿರುವ ಹಣವು ಇದರಲ್ಲಿ ಸೇರಿದೆ ಎಂದು ತಿಳಿಸಿದೆ. ಈ ಹಣದಲ್ಲಿ ಭಾರತೀಯರು, ಅನಿವಾಸಿ ಭಾರತೀಯರು ಬೇರೆ ದೇಶಗಳ ಸಂಸ್ಥೆಗಳ ಹೆಸರಿನಲ್ಲಿ ಇಡಲಾಗಿ ರುವ ಹಣವನ್ನು ಸೇರಿಸಿಲ್ಲ ಎಂದು ತಿಳಿದು ಬಂದಿದೆ.
2006ರಲ್ಲಿ ಸ್ವಿಸ್ ಬ್ಯಾಂಕ್‍ಗಳಲ್ಲಿ ಒಟ್ಟು 23,000 ಕೋಟಿ ರೂ. ಹಣವನ್ನು ಇಡಲಾಗಿತ್ತು. ಇದು ಇಲ್ಲಿಯವರೆಗೆ ಭಾರತೀಯರು ಇರಿಸಿದ್ದ ಗರಿಷ್ಠ ಮೊತ್ತವಾಗಿತ್ತು. 2010, 2013, 2017 ಹೊರತು ಪಡಿಸಿ ನಂತರದ ವರ್ಷಗಳಲ್ಲಿ ಠೇವಣಿ ಇಳಿಕೆಯಾಗಿತ್ತು. ಆದರೆ 2020ರಲ್ಲಿ ಈ ಮೊತ್ತ 20,700 ಕೋಟಿ ರೂ.ಗೆ ಜಿಗಿದಿದೆ.
ಈ ನಡುವೆ ವಯಕ್ತಿಕ ಹಣ ಠೇವಣಿಯಲ್ಲಿ ಇಳಿಕೆಯಾಗಿದ್ದು, 2019ರಲ್ಲಿ ಭಾರತೀಯರು ವೈಯಕ್ತಿಕವಾಗಿ 4,500 ಕೋಟಿ ರೂ. ಇಟ್ಟಿದ್ದರು. ಆದರೆ ಈಗ ಇದು 4,000 ಕೋಟಿ ರೂ.ಗೆ ಇಳಿಕೆಯಾಗಿದೆ ಎಂದು ತಿಳಿದು ಬಂದಿದೆ. ಸ್ವೀಜ್ ಬ್ಯಾಂಕಿನಲ್ಲಿ ಅತೀ ಹೆಚ್ಚು ಠೇವಣಿ ಹೊಂದಿರುವ 10 ರಾಷ್ಟ್ರಗಳಲ್ಲಿ ವೆಸ್ಟ್ ಇಂಡೀಸ್, ಫ್ರಾನ್ಸ್, ಹಾಂಕಾಂಗ್, ಜರ್ಮನಿ, ಸಿಂಗಾಪುರ, ಲಕ್ಸೆಂಬರ್ಗ್, ಕೇಮನ್ ದ್ವೀಪಗಳು ಮತ್ತು ಬಹಾಮಾಸ್ ಅನುಕ್ರಮವಾಗಿ ಸ್ಥಾನವನ್ನು ಪಡೆದಿವೆ. ಈ ಪಟ್ಟಿಯಲ್ಲಿ ಭಾರತ 51ನೇ ಸ್ಥಾನ ಪಡೆದಿದೆ.