ಬಿಜೆಪಿಯಲ್ಲೂ ಕುಟುಂಬ ರಾಜಕಾರಣ, ರಾಕ್ಷಸ ರಾಜಕಾರಣ ಕಾಣ್ತಿದ್ದೇವೆ- ಹೆಚ್.ವಿಶ್ವನಾಥ್
ಬೆಂಗಳೂರು ಜೂ.17 : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ, ಹಾಗಾಗಿ ಅವರಗೆ ಸ್ಪಿರಿಟ್ ಇಲ್ಲ ಎಂದು ಎಂಎಲ್‍ಸಿ ಹೆಚ್. ವಿಶ್ವನಾಥ್ ಹೇಳಿದ್ದಾರೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ವಸ್ತುಸ್ಥಿತಿ ಹೇಳಿದ್ದೇನೆ. ನಮಗೆ ಮಂತ್ರಿಗಿರಿ ಸಿಕ್ಕಿಲ್ಲ ಅನ್ನೋ ಬೇಸರವಿಲ್ಲ. ಈ ಬಗ್ಗೆ ನಾನು ದೂರುತ್ತಿಲ್ಲ. ಅರುಣ್ ಸಿಂಗ್ ಅವರಿಗೆ ಪಕ್ಷದ ವಸ್ತುಸ್ಥಿತಿಯನ್ನು ಆಳವಾಗಿ ತಿಳಿಸಿದ್ದೇನೆ. ನಾನು ಯಾರ ಬಣವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ಯಡಿಯೂರಪ್ಪಗೆ ವಯಸ್ಸಾಗಿದೆ, ಸ್ಪಿರಿಟ್ ಇಲ್ಲ ಎಂದರು.
ಹಲವು ವಿಚಾರ ವಿರೋಧ ಮಾಡಿ ಜೆಡಿಎಸ್ ಗೆ ರಾಜಿನಾಮೆ ಕೊಟ್ಟು ಹೊರ ಬಂದಿದ್ದೆವು ಎಂದ ಅವರು, ಬಿಜೆಪಿಯಲ್ಲೂ ಅವೇ ವಿಚಾರಗಳಿವೆ. ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಇದೆ. ರಾಕ್ಷಸ ರಾಜಕಾರಣ ಇಲ್ಲೂ ಕಾಣ್ತಿದ್ದೇವೆ ಎಂದರು. ಇದೇ ವೇಳೆ ನಾನು ಪ್ರಧಾನಿಗಳ ಜತೆ ನೇರ ಸಂಪರ್ಕ ಇಟ್ಕೊಂಡಿದ್ದೇನೆ. ಯಡಿಯೂರಪ್ಪ ಮಾಡಿದ ಕೆಲಸಗಳ ಬಗ್ಗೆ ಗೌರವ ಇದೆ. ಆದರೂ ಇವತ್ತಿನ ಪ್ರಶ್ನೆ ಯಡಿಯೂರಪ್ಪ ಬಗ್ಗೆ ಅಲ್ಲ ಎಂದರು.
ಹೈಕಮಾಂಡ್ ಎಸ್ ಅಂದ್ರೆ ರಾಜೀನಾಮೆಗೆ ಸಿದ್ಧ ಅಂತ ಖುದ್ದು ಬಿಎಸ್‍ವೈ ಅವರೇ ಹೇಳಿದ್ದಾರೆ. ಆ ಪ್ರಕಾರ ಆಗಿ ಅವರು ಪಕ್ಷದಲ್ಲಿ ಮಾರ್ಗದರ್ಶಕರಾಗಿ ಮುಂದುವರಿಯಲಿ. ಪಂಚಮಸಾಲಿಯಲ್ಲಿ ನಿರಾಣಿ, ಯತ್ನಾಳ್, ಬೆಲ್ಲದ್ ಇದ್ದಾರೆ. ಯಂಗ್ ಸ್ಟರ್ ಬೇಕಾದರೆ ಬೆಲ್ಲದ್ ರನ್ನು ಮಾಡಿ. ಮಧ್ಯ ವಯಸ್ಕ ಬೇಕಾದರೆ ನಿರಾಣಿಯವರನ್ನ ಮಾಡಿ. ಎಲ್ಲದಕ್ಕೂ ಬೇಕು ಅಂದ್ರೆ ಯತ್ನಾಳ್ ಅವರನ್ನ ಮಾಡಿ ಎಂದು ತಿಳಿಸಿದರು.