ನಾನು ಸಿಎಂ ರೇಸ್’ನಲ್ಲಿ ಇಲ್ಲ- ಮುರುಗೇಶ್ ನಿರಾಣಿ
ಬೆಂಗಳೂರು ಜೂ.17: ನಾನು ಸಿಎಂ ರೇಸ್ನಲ್ಲಿ ಇಲ್ಲ ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಮುರುಗೇಶ್ ನಿರಾಣಿ ಹೆಸರು ಸಿಎಂ ರೇಸ್ ನಲ್ಲಿ ಇದೆ ಎಂಬ ಸುದ್ದಿಗಳು ಮಾಧ್ಯಮದಲ್ಲಿ ಹರಿದಾಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರಿ ವಸತಿ ಗೃಹದಲ್ಲಿ ಸಚಿವ ಶಿವರಾಂ ಹೆಬ್ಬಾರ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಸಿಎಂ ರೇಸ್ ನಲ್ಲಿ ನಾನಿಲ್ಲ. ನಾನು ಸಿಎಂ ಆಕಾಂಕ್ಷಿಯೂ ಅಲ್ಲ. ಮಾಧ್ಯಮದವರೇ ನನ್ನ ಹೆಸರನ್ನ ಹೇಳುತ್ತಿರುವುದು. ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು ಹೈಕಮಾಂಡ್ ನನಗೆ ಕೊಟ್ಟ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿರ್ವಹಿಸಲಿದ್ದೇನೆ. ಅಲ್ಲದೆ ಯಡಿಯೂರಪ್ಪನವರೆ ಮುಂದಿನ ಎರಡು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳಿದರು.
ಈಗಾಗಲೇ ರಾಷ್ಟ್ರೀಯ ನಾಯಕರು ಯಡಿಯೂರಪ್ಪ ಎರಡು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಅಂತ ಹೇಳಿದ್ದಾರೆ. ನಾನು ಅದನ್ನೇ ಹೇಳಿದ್ದೇನೆ. ನಾನು ಪರ – ವಿರೋಧದ ಹೇಳಿಕೆ ನೀಡಲ್ಲ. ಸಚಿವನಾಗಿ ಕೆಲಸ ಮಾಡ್ತಾ ಇದ್ದೇವೆ. ಅರುಣ್ ಸಿಂಗ್ ಸಹ ಕೆಲವು ಸೂಚನೆ ಕೊಟ್ಟಿದ್ದಾರೆ. ಅವರ ಭೇಟಿ ವೇಳೆಯೂ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಿಲ್ಲ. ಪಕ್ಷವನ್ನ ಮುಂದೆ ಅಧಿಕಾರಕ್ಕೆ ತರಲು ಎಫೆಕ್ಟ್ ಆಗಿ ಕೆಲಸ ಮಾಡಿ. ಜನರ ಕೆಲಸ, ಜಿಲ್ಲೆ ಜವಬ್ದಾರಿ ಅಚ್ಚುಕಟ್ಟಾಗಿ ಮಾಡಿ ಅಂತ ಹೇಳಿದ್ದಾರೆ. ಅದರಂತೆ ನಾವೆಲ್ಲ ನಡೆದುಕೊಳ್ಳುತ್ತೇವೆ. ಮುಂದಿನ ದಿನಗಳಲ್ಲೂ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದರು