ಒಎಲ್‌ಎಕ್ಸ್‌ ನಲ್ಲಿ ಕಾರು ಮಾರಾಟಕ್ಕಿದೆಂದು ವಂಚನೆ

ಹಾವೇರಿ ಜೂ.17: ಆನ್ಲೈನ್ ನಲ್ಲಿ ವಸ್ತು, ಉತ್ಪನ್ನಗಳನ್ನು ಖರೀದಿಸುವಾಗ ಅನೇಕ ಮಂದಿ ಮೋಸ ಹೋಗಿರುವ ಘಟನೆ ಬಗ್ಗೆ ನಾವು ಆಗಾಗ ಕೇಳುತ್ತಲೇ ಇರುತ್ತೇವೆ.

ಅದೇ ರೀತಿ ಇಲ್ಲೊಬ್ಬರು ಆನ್ಲೈನ್ ನಲ್ಲಿ ಮೋಸ ಹೋಗಿರುವ ಘಟನೆ ನಡೆದಿದೆ. ಕೋವಿಡ್ ಬಿಕ್ಕಟ್ಟಿನ ನಡುವೆ ಆನ್ಲೈನ್ ವ್ಯವಹಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ತಿಮ್ಮನಗೌಡ ಎಂಬ ವ್ಯಕ್ತಿ ಒಎಲ್‌ಎಕ್ಸ್‌ನಲ್ಲಿ ಕಾರು ಮಾರಾಟಕ್ಕಿದೆ ಎಂದು ಹಾಕಿಕೊಂಡು ಯುವಕನೊಬ್ಬನಿಂದ ಹಣ ಪಡೆದು ವಂಚಿಸಿದ್ದಾನೆ.

ಕಳೆದ ಕೆಲವು ದಿನಗಳ ಹಿಂದೆ ಒಎಲ್‍ಎಕ್ಸ್ ಆ್ಯಪ್‍ನ ಜಾಹೀರಾತಿನಲ್ಲಿ ಸ್ವಿಫ್ಟ್ ಡಿಸೈರ್ ಕಾರು ಮಾರಾಟಕ್ಕೆ ಇದೆ ಎಂಬ ಜಾಹೀರಾತನ್ನು ಶಿವಪುರ ಗ್ರಾಮದ  ಚೇತನ್ ಎಂಬ ಯುವಕ ಗಮನಿಸಿದ್ದಾನೆ. ಬಳಿಕ ಜಾಹೀರಾತಿನಲ್ಲಿದ್ದ ನಂಬರ್ ಪಡೆದು ಕೊಂಡು ಕರೆ ಮಾಡಿದ್ದಾನೆ. 

ಆಗ ವ್ಯಕ್ತಿ ತನ್ನ ಹೆಸರ ತಿಮ್ಮನಗೌಡ ತಾನು ಆರ್ಮಿಯಲ್ಲಿ ಡಾಕ್ಟರ್ ಆಗಿದ್ದು, ಜಮ್ಮುಕಾಶ್ಮೀರ ಆರ್ಮಿ ಕ್ಯಾಂಪ್ ಗೆ ವರ್ಗಾವಣೆ ಆಗಿದೆ. ಹೀಗಾಗಿ ಕಾರು ಮಾರಾಟ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾನೆ. ಆರ್ಮಿ ಡಾಕ್ಟರ್ ಎಂದು ಪರಿಚಯಿಸಿಕೊಂಡ ಮೇಲೆ ಯುವಕ ಚೇತನ್‍ಗೆ ಅವನ ಮೇಲೆ ಎಲ್ಲಿಲ್ಲದ ಭರವಸೆ ಮೂಡಿದೆ. ಕೊನೆಗೆ ಫೋನ್ ನಲ್ಲಿಯೇ ಒಂದು ಲಕ್ಷ ಹತ್ತು ಸಾವಿರ ರೂಪಾಯಿಗೆ ಕಾರಿನ ವ್ಯವಹಾರ ಮುಗಿಸಿಕೊಂಡು ಚೇತನ್ ಬಳಿಕ ಹಣ ವರ್ಗಾವಣೆಗೆ ಮುಂದಾಗಿದ್ದಾನೆ.

ಈ ವೇಳೆ ತಿಮ್ಮನಗೌಡ ಕಾರನ್ನು ಡೆಲಿವರಿ ಮಾಡಲು ಸೆಕ್ಯೂರಿಟಿ ಚಾರ್ಜ್, ಜಿಪಿಎಸ್ ಚಾರ್ಜ್, ಡಾಕ್ಯುಮೆಂಟ್ ಚಾರ್ಜ್, ಎನ್‍ಓಸಿ ಚಾರ್ಜ್ ಎಂದು ಬರೋಬ್ಬರಿ 71,798 ರೂಪಾಯಿಗಳನ್ನು ಫೋನ್ಪೆ ನಂಬರ್ ಮೂಲಕ ಚೇತನ್ ಕಡೆಯಿಂದ ಹಣ ವರ್ಗಾವಣೆ  ಮಾಡಿಸಿಕೊಂಡಿದ್ದಾನೆ. ಆದರೆ ಬಳಿಕ ಕಾರು ಕೊಡದೆ, ಹಣವನ್ನೂ ಮರುಕಳಿಸದೆ ಯಾಮಾರಿಸಿದ್ದಾನೆ. ಕಾರಿಗಾಗಿ ಹಣ ಹಾಕಿ ಕಂಗಾಲಾದ ಚೇತನ್ ತಾನು ಮೋಸ ಹೋಗಿದ್ದೇನೆ ಎಂಬುದನ್ನು ಅರಿತುಕೊಂಡು ಹಾವೇರಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ತಿಮ್ಮನಗೌಡ ಎಂಬ ಹೆಸರಿನವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!