ಕಾಂಗ್ರೆಸ್ ಕಾಮಾಲೆ ಕಣ್ಣಿನ ದೃಷ್ಟಿಕೋನದಿಂದ ಹೊರ ಬರಲಿ: ಕುಯಿಲಾಡಿ ಸುರೇಶ್

ಸದಾ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡು ದೇಶ, ಧರ್ಮವನ್ನು ಒಡೆಯುವ ಕೀಳು ರಾಜಕೀಯದಲ್ಲಿ ನಿರತವಾಗಿರುವ ಕಾಂಗ್ರೆಸ್ ತನ್ನ ಕಾಮಾಲೆ ಕಣ್ಣಿನ ದೃಷ್ಟಿಕೋನದಿಂದ ಹೊರ ಬರಲಿ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಾದ್ಯಂತ ನಡೆಯುತ್ತಿರುವ ದಾಖಲೆಯ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಸಹಿಸದ ಕಾಂಗ್ರೆಸ್ ಸದಾ ಅಪಪ್ರಚಾರ ಮತ್ತು ದೇಶ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ದೇಶದ ಏಕತೆಗೆ ಧಕ್ಕೆ ತರುವಂತಹ ಹೀನ ಕೃತ್ಯದಲ್ಲಿ ತೊಡಗಿರುವುದು ಶೋಚನೀಯ. ಒಂದೇ ಕುಟುಂಬದ ಉದ್ಧಾರ ಮತ್ತು  ಗುಲಾಮಗಿರಿ ಸಂಸ್ಕೃತಿಗೆ ಒಗ್ಗಿಕೊಂಡಿರುವ ಕಾಂಗ್ರೆಸ್ ನಾಯಕರು ಅಪಪ್ರಚಾರವನ್ನೇ ತಮ್ಮ ಬಂಡವಾಳವನ್ನಾಗಿಸಿಕೊಂಡಿರುವುದು ವಿಷಾದನೀಯ.

ಸ್ವಾತಂತ್ರ್ಯಾ ನಂತರ ಸುದೀರ್ಘ ಅವಧಿಗೆ ದೇಶವನ್ನಾಳಿದ ಕಾಂಗ್ರೆಸ್, ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿ, ಬಡತನ ನಿವಾರಣೆ ಯನ್ನು ಕೇವಲ ಘೋಷಣೆಗಷ್ಟೇ ಸೀಮಿತಗೊಳಿಸಿರುವುದು ಇತಿಹಾಸ. ಸಾವಿರಾರು ಹಳ್ಳಿಗಳ ವಿಧ್ಯುದ್ಧೀಕರಣ, ಉಚಿತ ಗ್ಯಾಸ್  ವಿತರಣೆ, ಜನ್ ಧನ್ ಖಾತೆ, ಆಯುಷ್ಮಾನ್ ಭಾರತ್, ಕಿಸಾನ್ ಸಮ್ಮಾನ್ ಮುಂತಾದ ನೂರಾರು ಜನಪರ ಯೋಜನೆಗಳ ಸಹಿತ ಉಚಿತ ಕೋವಿಡ್ ಲಸಿಕೆ ವಿತರಣೆ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಡವರ ಕಣ್ಣೀರೊರೆಸುವ ಕಾಯಕದಲ್ಲಿ ನಿರತವಾಗಿದೆ. ಕಾಂಗ್ರೆಸ್ ಮಾತ್ರದೇಶ ವಿರೋಧಿ ಟೂಲ್ ಕಿಟ್ ನಂತಹ ತುಚ್ಛ ಅಭಿಯಾನದಲ್ಲಿ ತೊಡಗಿಸಿ ಕೊಂಡಿರುವುದು ವಿಪರ್ಯಾಸ.

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸೇವಾ ಹೀ ಸಂಘಟನ್ ತತ್ವದಡಿ ರಾಜ್ಯದಾದ್ಯಂತ ಬಿಜೆಪಿ ಕಾರ್ಯಕರ್ತರು ನಿರಂತರ  ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದರೆ,ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆಗಳ ವಿರುದ್ದ ಕೀಳು ಮಟ್ಟದ ಅಪಪ್ರಚಾರ ಅಭಿಯಾನದಲ್ಲಿ  ನಿರತವಾಗಿರುವುದೇ ಕಾಂಗ್ರೆಸ್ ಸಾಧನೆಯಾಗಿದೆ. ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ತನ್ನ ಆಡಳಿತಾವಧಿಯ 2014ರ ಮೊದಲು ಪೆಟ್ರೋಲ್ ಬೆಲೆ ಯಾವ ಮಟ್ಟದಲ್ಲಿ ಏರಿಕೆಯಾಗುತ್ತಲೇ ಬಂದಿದೆ ಎಂಬ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳುವುದರ ಜೊತೆಗೆ ಕಾಂಗ್ರೆಸ್ ಆಡಳಿತ ವಿರುವ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆಯನ್ನು ಇಳಿಸಿ ಮಾದರಿಯಾಗುವುದು ಉತ್ತಮ.

ದೇಶದ ಅಖಂಡತೆ ಮತ್ತು ಏಕತೆಗೆ ಒತ್ತು ನೀಡುವ ಜೊತೆಗೆ ಅಭಿವೃದ್ಧಿ ಪರ ಆಡಳಿತ ಬಿಜೆಪಿಯ ಮೂಲ ಮಂತ್ರ. ಈ ನೀತಿಗೆ ವಿರುದ್ಧವಾಗಿರುವ ಕಾಂಗ್ರೆಸ್ ಸ್ಥಿತಿ ದೇಶದ ವಿವಿಧ ರಾಜ್ಯಗಳಲ್ಲಿ ಯಾವ ಮಟ್ಟಕ್ಕೆ ಕುಸಿದಿದೆ ಎಂಬುದು ಜಗಜ್ಜಾಹೀರಾಗಿದೆ. ಆದರೂ  ಪ್ರಧಾನಿ ಮೋದಿ ವಿರೋಧಿ ಮಾನಸಿಕತೆಯಿಂದ ಕಾಂಗ್ರೆಸ್ ದೇಶ ವಿರೋಧಿ ಮನಸ್ಥಿತಿಯತ್ತ ಹೊರಳಿರುವುದು ಮಾತ್ರ ಶೋಚನೀಯ. ಈ ಎಲ್ಲ ವಿದ್ಯಮಾನಗಳನ್ನು ಜನತೆ ಕೂಲಂಕುಷವಾಗಿ  ಗಮನಿಸುತ್ತಿದ್ದು ದೇಶ ವಿರೋಧಿ ಕಾಂಗ್ರೆಸ್ಸಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!