ಮೃತರ ಕುಟುಂಬಕ್ಕೆ ಪರಿಹಾರ ನೀಡುವಾಗ ತಾರತಮ್ಯ ಬೇಡ: ಕಟಪಾಡಿ ಶಂಕರ ಪೂಜಾರಿ
ಉಡುಪಿ ಜೂ.16(ಉಡುಪಿ ಟೈಮ್ಸ್ ವರದಿ): ಕೊರೋನಾದಿಂದ ಮೃತರ ಕುಟುಂಬಕ್ಕೆ ಪರಿಹಾರ ನೀಡುವಾಗ ಎಪಿಎಲ್, ಬಿಪಿಎಲ್ ಎಂಬ ತಾರತಮ್ಯ ಬೇಡ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾಂಕ್ರಮಿಕ ಕೊರೋನಾ ಕಾಯಿಲೆಯಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಅವರ ಕ್ರಮವನ್ನು ಸ್ವಾಗತಿಸುತ್ತೇನೆ. ಆದರೆ ಸಾರ್ವತ್ರಿಕ ಸಂಕಷ್ಟದ ಸಂದರ್ಭದಲ್ಲಿ ಎಪಿಎಲ್, ಬಿಪಿಎಲ್ ಎಂಬ ತಾರತಮ್ಯ ಸರಿಯಲ್ಲ ಎಂದಿದ್ದಾರೆ. ಬೇರೆ ಬೇರೆ ತಾಂತ್ರಿಕ ಹಾಗೂ ಕೌಟುಂಬಿಕ ಕಾರಣಗಳಿಂದಾಗಿ ಬಿಪಿಎಲ್ ಪಡಿತರ ಚೀಟಿ ಪಡೆಯಲಾಗದ ಬಹಳಷ್ಟು ಬಡ ಕುಟುಂಬಗಳಿವೆ ಎಪಿಎಲ್ ಪಡಿತರ ಚೀಟಿ ಹೊಂದಿದ ಮಾತ್ರಕ್ಕೆ ಎಲ್ಲರೂ ಶ್ರೀಮಂತರಾಗಿರುವುದಿಲ್ಲ ವಿಶೇಷವಾಗಿ ಕೊರೋನಾದ ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲರೂ ಸಮಾನ ಸಂತ್ರಸ್ತರು. ಹಾಗಾಗಿ ಮುಖ್ಯಮಂತ್ರಿಗಳು ತಮ್ಮ ನಿರ್ಧಾರವನ್ನು ಮರು ಪರಿಶೀಲಿಸಿ ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ಸಮಾನ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.