ಬೈಂದೂರು: ಅನ್ನಭಾಗ್ಯ ಯೋಜನೆಯ ಅಕ್ರಮ ದಾಸ್ತಾನು ಗೋದಾಮಿಗೆ ದಾಳಿ- 4ಲಕ್ಷ ಮೌಲ್ಯದ ಅಕ್ಕಿ ಸ್ವಾಧೀನ
ಬೈಂದೂರು ಜೂ.16: ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮ ದಾಸ್ತಾನು ಮಾಡಿದ್ದ ಗೋದಾಮಿಗೆ ದಾಳಿ ನಡೆಸಿದ ಅಧಿಕಾರಿಗಳು ಲಕ್ಷಾಂತರ ರೂ ಮೌಲ್ಯದ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬೋಳಂಬಳ್ಳಿ ಎಂಬಲ್ಲಿನ ಪ್ರಥ್ವೀರಾಜ್ ಜೈನ್ ರವರಿಗೆ ಸಂಬಂಧಿಸಿದ ಪ್ರಥ್ವಿ ಗೇರು ಬೀಜ ಕಾರ್ಖಾನೆ ಗೋದಾಮಿನಲ್ಲಿ ಅಯೂಬ್ ಎಂಬ ವ್ಯಕ್ತಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ದಾಸ್ತಾನು ಇರಿಸಿದ ಬಗ್ಗೆ ಖಚಿತ ಮಾಹಿತಿ ಪಡೆದ ತಾಲೂಕು ಆಹಾರ ನಿರೀಕ್ಷಕ ವಿನಯ ಕುಮಾರ್ ಅವರು, ಗೋದಾಮಿಗೆ ದಾಳಿ ನಡೆಸಿದರು ಈ ವೇಳೆ ಪ್ರಥ್ವಿರಾಜ್ ಜೈನ್ ರವರಿಗೆ ಸಂಬಂಧಿಸಿದ ಪ್ರಥ್ವಿ ಗೇರು ಬೀಜ ಕಾರ್ಖಾನೆಯ ಗೋದಾಮಿನಲ್ಲಿದ್ದ ಇದ್ದ 4,02,000 ರೂ. ಮೌಲ್ಯದ 335 ಚೀಲ (16750 ಕೆಜಿ)ದಷ್ಟು ಅಕ್ಕಿಯನ್ನು ಮತ್ತು ಇಲೆಕ್ಟ್ರಾನಿಕ್ ತೂಕದ ಯಂತ್ರ, ಚೀಲ ಹೊಲಿಯುವ ಯಂತ್ರ ಹಾಗೂ 10 ಗೋಣಿ ಚೀಲಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.