ಉಡುಪಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ
ಉಡುಪಿ : (ಉಡುಪಿ ಟೈಮ್ಸ್ ವರದಿ) ಕೇಂದ್ರದ ಬಿಜೆಪಿ ಸರಕಾರ ದಿನನಿತ್ಯ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವುದನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಯೋಧರ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡುತ್ತಾ, ಕೋರೊನ ಮಹಾಮಾರಿಯ ನಡುವೆಯೂ ಕೇಂದ್ರ ಸರಕಾರ ಜನಸಾಮಾನ್ಯರ ಮೇಲೆ ಹಗಲು ದರೋಡೆ ಮಾಡುತ್ತಿದೆ. ಪದೇ ಪದೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಸಾಮಾನ್ಯ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ದರ ಕಡಿಮೆ ಮಾಡುವುದಾಗಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು, ಈಗ ದೇಶದ ಜನರನ್ನು ಕಷ್ಟದ ಪರಿಸ್ಥಿತಿಗೆ ತಂದಿಡುತ್ತಿದ್ದಾರೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್ ಮಾತನಾಡುತ್ತಾ, ಹಿಂದಿನ ಯುಪಿಎ ಸರಕಾರ ಬೆಲೆ ಏರಿಕೆ ಮಾಡಿದಾಗ ರಸ್ತೆಗಿಳಿದು ಭಾರಿ ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿ ನಾಯಕರುಗಳು ಕಾಣ ಸಿಗುತ್ತಿಲ್ಲ. ದೇಶದ ಪ್ರಧಾನಿ ನರೇಂದ್ರ ಮೋದಿ ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ದೇಶದ ಜನರಿಗೆ ಬೆಲೆ ಏರಿಕೆಯ ಬಗ್ಗೆ ಕಾಂಗ್ರೆಸ್ ಪಕ್ಷ ಮಾಹಿತಿ ನೀಡುವ ಕೆಲಸ ಮಾಡುತ್ತದೆ ಎಂದರು.
ಹಿರಿಯ ನಾಯಕಿ ವೆರೋನಿಕಾ ಕರ್ನೇಲಿಯೋ ಮಾತನಾಡುತ್ತಾ, ದೇಶ ಸಂಕಷ್ಟದಲ್ಲಿರುವ ಸಮಯದಲ್ಲಿ ಕೇಂದ್ರ ಸರಕಾರವು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪದೇ ಪದೆ ಏರಿಕೆ ಮಾಡುತ್ತಿರುವುದು ಖಂಡನೀಯ. ಹಿಂದಿನ ಸರಕಾರಗಳು ಬೆಲೆ ಏರಿಕೆ ನಡೆಸಿದ್ದಾಗ ಪ್ರತಿಭಟನೆ ಮಾಡುತ್ತಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸಂಸದೆ ಶೋಭಾ ಕರಂದಾಜ್ಲೆ ಮತ್ತು ಬಿಜೆಪಿಯ ನಾಯಕರುಗಳಿಗೆ ಈಗ ಸಮಸ್ಯೆ ಅರ್ಥವಾಗುತ್ತಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯಲ್ಲಿ ಕೇಂದ್ರ ಸರಕಾರದ ದರ ಏರಿಕೆಯ ವಿರುದ್ಧ ಘೋಷವಾಕ್ಯಗಳು ಮೊಳಗಿದವು. ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಯು ಆರ್ ಸಭಾಪತಿ, ಪ್ರಮುಖರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಪ್ರಖ್ಯಾತ್ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ಪ್ರಶಾಂತ್ ಜತ್ತನ್ನ, ಗೀತಾ ವಾಗ್ಲೆ, ಡಾ. ಸುನೀತಾ ಶೆಟ್ಟಿ, ರೋಶನಿ ಒಲಿವೆರಾ, ನಾಗೇಶ್ ಕುಮಾರ್ ಉದ್ಯಾವರ, ಜನಾರ್ದನ ಭಂಡಾರ್ಕರ್, ಯತೀಶ್ ಕರ್ಕೇರ, ವಿನಯ ಬಲ್ಲಾಳ್, ಪ್ರಭಾಕರ ಆಚಾರ್ಯ, ಅಖಿಲೇಶ್ ಕೋಟ್ಯಾನ್,ಪೀರುಸಾಹೇಬ್, ಸುನಿಲ್ ಬಂಗೇರ, ನವೀನಚಂದ್ರ ಸುವರ್ಣ, ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.