ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾದ ಡಿ.ವಿ.ಸದಾನಂದಗೌಡ – ಪ್ರಧಾನಿ ಭೇಟಿ

ನವದೆಹಲಿ, ಜೂ 16: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿರುವಂತೆ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿಗೂ ಮುನ್ನ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಪ್ರಧಾನಿ ಮೋದಿ ದೆಹಲಿಯ ತಮ್ಮ ನಿವಾಸಕ್ಕೆ ಸಚಿವ ಡಿ.ವಿ.ಸದಾನಂದಗೌಡ ಅವರನ್ನು ಕರೆಸಿಕೊಂಡು ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಕರ್ನಾಟಕದಲ್ಲಿ ಕೆಲ ಸಚಿವರ, ಶಾಸಕರ ಅಸಮಾಧಾನ, ಮಾತ್ರವಲ್ಲದೆ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆಯೂ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.ಇಂದು ಮಧ್ಯಾಹ್ನ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಲಿದ್ದು, ಅರುಣ್ ಸಿಂಗ್ ಭೇಟಿಗೂ ಮೊದಲೇ ಡಿವಿಎಸ್ ರಿಂದ ಪ್ರಧಾನಿ ಮೋದಿ ಭೇಟಿಯಾಗಿ ಚರ್ಚೆ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇದೇ ವೇಳೆ ಅಖಿಲ ಭಾರತ ಲಿಂಗಾಯತ-ವೀರಶೈವ ವೇದಿಕೆ ಸೋಮವಾರ ಹೇಳಿಕೆ ನೀಡಿ, ಯಡಿಯೂರಪ್ಪ ತಮ್ಮ ಅವಧಿ ಪೂರ್ಣಗೊಳಿಸಲು ಬಿಡಬೇಕೆಂದು ಆಗ್ರಹಿಸಿದೆ.

ಕಳೆದ ವಾರವಷ್ಟೆ ಬೆಕ್ಕಿನ ಕಲ್ ಮಠದ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮಿ ಸಿಎಂ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದರು. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆಯ ಹಿನ್ನೆಲೆಯಲ್ಲಿ ಹಾಗೂ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲಿ ಈ ಸ್ವಾಮೀಜಿಗಳು ಸಿಎಂ ಪರವಾಗಿ ನಿಂತಿದ್ದಾರೆ. 

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಕಳೆದ ವಾರ ಲಿಂಗಾಯತ ಸ್ವಾಮೀಜಿಗಳ ಜೊತೆ ಸರಣಿ ಸಭೆ ನಡೆಸಿ ಸಮಾಲೋಚಿಸಿ ದ್ದರು. ಅದಾದರ ನಂತರ 17 ಮಠಾಧೀಶರು ತಮ್ಮ ಬೆಂಬಲ ಸೂಚಿಸಿದ್ದಾರೆ. ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಬಂದ ನಂತರ ವಿಜಯೇಂದ್ರ ಮಠಾಧೀಶರ ಬಳಿ ತೆರಳಿದ್ದರು, ಅರುಣಿ ಸಿಂಗ್ ಭೇಟಿಯ ವೇಳೆ ಮಠಾಧೀಶರು ಸಿಎಂ ಗೆ ಬೆಂಬಲ ಸೂಚಿಸಬೇಕು ಎಂಬುದು ಇದರ ಉದ್ದೇಶವಿರಬೇಕು,. 

ಆದರೆ ಬಿಜೆಪಿ ರಾಜ್ಯ ಘಟಕದ ಶಾಸಕರು ಮತ್ತು ಪದಾಧಿಕಾರಿಗಳು ಸಿಂಗ್ ಅವರ ಭೇಟಿಯ ಬಗ್ಗೆ ಯಾವುದೇ ವಿಶ್ವಾಸವನ್ನು ಹೊಂದಿಲ್ಲ. ಯಾವುದೇ ಗುಂಪು ಸಭೆಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಕೇಂದ್ರ ನಾಯಕತ್ವ ಮೌಖಿಕ ಸೂಚನೆಗಳನ್ನು ನೀಡಿದೆ. ಆದರೆ ಪಕ್ಷದ ಶಾಸಕರು ಅರುಣ್ ಸಿಂಗ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ತಮ್ಮ ಕುಂದುಕೊರತೆ ತಿಳಿಸಬಹುದು ಎಂದು ಸೂಚಿಸಿದೆ, ಇದೆಲ್ಲಾ ಕಣ್ಣೊರೆಸುವ ತಂತ್ರವಾಗಿದೆ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ.

ಯಡಿಯೂರಪ್ಪ ಪರವಾಗಿ ಅಥವಾ ವಿರೋಧವಾಗಿ ಯಾವುದೇ ಸಮರ್ಥನೆ ನೀಡುವುದನ್ನು ತಪ್ಪಿಸಲು ಈ ಕೆಲಸ ನಡೆಯುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ, ಅರುಣ್ ಸಿಂಗ್ ರಾಜ್ಯ ಭೇಟಿ ವ್ಯರ್ಥ, ಅದರಿಂದ ಯಾವುದೇ ಪ್ರಯೋಜನವೂ ಇಲ್ಲ, ಹೀಗಿದ್ದರೂ ಶಾಸಕರು ಕೇಂದ್ರ ನಾಯಕರಿಗೆ ತಮ್ಮ ಸಮಸ್ಯೆಗಳನ್ನು ತಿಳಿಸಲಿದ್ದಾರೆ,

ನಮಗೆ ಸರ್ಕಾರ ಮತ್ತು ಮುಖ್ಯಮಂತ್ರಿಯವರ ಕಾರ್ಯವೈಖರಿಯ ಬಗ್ಗೆ ಸಾಕಷ್ಟು ದೂರುಗಳಿವೆ, ಆದರೆ ಅದನ್ನು ಸಾರ್ವಜನಿಕ ವಾಗಿ ಚರ್ಚಿಸಲಾಗುವುದಿಲ್ಲ. ಯಾವುದೇ  ಸಮಸ್ಯೆ ಇದ್ದರೂ, ನಾವು ಅರುಣ್ ಸಿಂಗ್ ಅವರಿಗೆ ತಿಳಿಸುತ್ತೇವೆ, ಇದಕ್ಕೆ ಸರಿಯಾಗಿ ಪರಿಹರ ಸಿಗಲಿದೆ ಎಂದು ಭಾವಿಸುತ್ತೇವೆ, ಒಂದು ವೇಳೆ ಅದು ವಿಫಲವಾದರೆ ಮುಂದಿನ ಕ್ರಮವು ಅನುಸರಿಸಲಾಗುತ್ತದೆ ಎಂದು ಮತ್ತೊಬ್ಬ ಬಿಜೆಪಿ ಶಾಸಕ ಹೇಳಿದ್ದಾರೆ.

ಬುಧವಾರದಿಂದ ಪ್ರಾರಂಭವಾಗುವ ಅರುಣ್ ಸಿಂಗ್ ಮೂರು ದಿನಗಳ ಭೇಟಿಯಲ್ಲಿ ಸಿಂಗ್ ಅವರು ಕ್ಯಾಬಿನೆಟ್ ಮಂತ್ರಿಗಳು ಮತ್ತು ಶಾಸಕರನ್ನು ಭೇಟಿ ಮಾಡಲಿದ್ದು, ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಶಾಸಕಾಂಗ ಪಕ್ಷದ ಸಭೆಗೆ ಶಾಸಕರು ಉತ್ಸುಕರಾಗಿದ್ದಾರೆ ಮತ್ತು ಯಡಿಯೂರಪ್ಪ ಅವರಿಗೆ  ನಿರ್ದೇಶನಗಳನ್ನು ನೀಡಲಿದ್ದಾರೆ ಎಂಬ ಭರವಸೆಯಿದೆ.

Leave a Reply

Your email address will not be published. Required fields are marked *

error: Content is protected !!