ಪತ್ರಿಕಾಗೋಷ್ಠಿಯಲ್ಲಿ ಕೋಕ್ ಬೇಡ ನೀರು ಕುಡಿಯಿರಿ ಎಂದ ರೊನಾಲ್ಡೊ: ವಿಡಿಯೋ ವೈರಲ್!

ಪೋರ್ಚುಗಲ್: ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಪತ್ರಿಕಾಗೋಷ್ಠಿಯಲ್ಲಿ ಕೋಕ್ ಬಾಟಲಿಗಳನ್ನು ದೂರ ಸರಿಸಿ ನೀರು ಕುಡಿಯಿರಿ ಎಂದು ಹೇಳಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಹಂಗೇರಿ ವಿರುದ್ಧದ ಯುರೋ 2020 ಪಂದ್ಯಕ್ಕೂ ಮುನ್ನ ಪೋರ್ಚುಗಲ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮೇಜಿನ ಮೇಲೆ ಕೊಕಾ-ಕೋಲಾ ಬಾಟಲಿಗಳನ್ನು ಇಟ್ಟಿದ್ದರು. ಇದನ್ನು ಕಂಡ 36ರ ಹರೆಯದ ರೊನಾಲ್ಡೊ ಬಾಟಲಿಗಳನ್ನು ದೂರ ಸರಿಸಿ ನಂತರ ನೀರಿನ ಬಾಟಲಿಗಳನ್ನು ಕೈಗೆತ್ತಿಕೊಂಡು ಎಲ್ಲರೂ ಕೋಲಾ ಬದಲಿಗೆ ನೀರು ಕುಡಿಯಿರಿ ಎಂದು ಹೇಳಿದ್ದಾರೆ. 

ಯುರೋ 2020ರ ಪಂದ್ಯಾವಳಿಗೆ ಕೋಕಾ ಕೋಲಾ ಅಧಿಕೃತ ಪ್ರವರ್ತಕನಾಗಿದ್ದರೂ ರೊನಾಲ್ಡೋ ವರ್ತನೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. 

ಕ್ರಿಸ್ಟಿಯಾನೊ ರೊನಾಲ್ಡೊ ಇನ್ನು ಒಂದು ಗೋಲು ಹೊಡೆದರೆ ಮೈಕೆಲ್ ಪ್ಲಾಟಿನಿ ದಾಖಲೆ ಮುರಿಯಲಿದ್ದಾರೆ. ಐದು ವರ್ಷಗಳ ಹಿಂದೆ ನಡೆದ ಫೈನಲ್‌ನಲ್ಲಿ ಪೋರ್ಚುಗಲ್ ಫ್ರಾನ್ಸ್‌ ತಂಡವನ್ನು ಮಣಿಸಿ ತನ್ನ ಮೊದಲ ಪ್ರಮುಖ ಸಾಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಪ್ರಸ್ತುತ ಟೂರ್ನಿಯಲ್ಲಿ ಪೋರ್ಚುಗಲ್ ಗುಂಪು ಎಫ್ ನಲ್ಲಿ ಹಂಗೇರಿ, ಫ್ರಾನ್ಸ್ ಮತ್ತು ಜರ್ಮನ್ ಒಳಗೊಂಡಿದೆ. ವಿಶ್ವಕಪ್ ಚಾಂಪಿಯನ್ ಫ್ರಾನ್ಸ್, ಜರ್ಮನಿಯನ್ನು ಎದುರಿಸಲಿದೆ. ಜರ್ಮನ್ 2014ರಲ್ಲಿ ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿತ್ತು

Leave a Reply

Your email address will not be published. Required fields are marked *

error: Content is protected !!