ಪ್ರತ್ಯಕ್ಷ ಸಾಕ್ಷಿಗಳು ಇಲ್ಲದೆಯೂ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ ಹೇಗೆ ಗೊತ್ತಾ…?
ಉಡುಪಿ, ಜೂ.15: ಎನ್ ಆರ್ ಐ ಉದ್ಯಮಿ ಉಡುಪಿಯ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಆರೋಪ ಸಾಬೀತಾಗಲು ವೈಜ್ಞಾನಿಕ ಸಾಕ್ಷ್ಯಗಳೇ ಪ್ರಮುಖ ಆಧಾರವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಆರೋಪ ಸಾಬೀತು ಮಾಡಲು ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಇರಲಿಲ್ಲ. ಇದು ಸಾಂದರ್ಬಿಕ ಸಾಕ್ಷಿಗಳ ಆಧಾರದಲ್ಲಿ ವಿಚಾರಣೆ ಆರಂಭಗೊಂಡಿತ್ತು. ತನಿಖಾಧಿಕಾರಿ ಸಿಐಡಿ ಡಿವೈಎಸ್ಪಿ ಎಸ್.ಟಿ. ಚಂದ್ರಶೇಖರ್ ನೇತೃತ್ವದ ತಂಡ ಸಂಗ್ರಹಿಸಿದ ವೈಜ್ಞಾನಿಕ ಸಾಕ್ಷಗಳೇ ಈ ಪ್ರಕರಣದ ಪ್ರಮುಖ ಆಧಾರವಾಗಿದ್ದವು.
ಕೊಲೆಗೆ 15 ದಿನಗಳ ಹಿಂದೆ ಅಂದರೆ 2016 ಜು.13ರಂದು ಭಾಸ್ಕರ್ ಶೆಟ್ಟಿ ಅವರು ತಮ್ಮ ಸಂಪತ್ತಿಗೆ ಸಂಬಂಧಿಸಿ ಆಡಿಟ್ ವರದಿಗಾಗಿ ದಾಖಲೆಗಳನ್ನು ಉಡುಪಿಯ ಲೆಕ್ಕ ಪರಿಶೋಧಕರೊಬ್ಬರಲ್ಲಿ ನೀಡಿದ್ದರು. ಕೊಲೆ ನಡೆದ(ಜು.28) ಐದು ದಿನಗಳ ಬಳಿಕ ಅಂದರೆ ಆ.2ರಂದು ಆರೋಪಿಗಳಾದ ರಾಜೇಶ್ವರಿ ಶೆಟ್ಟಿ ಹಾಗೂ ಮಗ ನವನೀತ್ ಶೆಟ್ಟಿ, ಲೆಕ್ಕಪರಿಶೋಧಕರ ಬಳಿ ತೆರಳಿ ಆ ಆಡಿಟ್ ವರದಿ ಯನ್ನು ಪಡೆದುಕೊಂಡು ಬಂದಿದ್ದರು. ಈ ವಿಚಾರವನ್ನು ಸಿಐಡಿ ತಂಡ ತನಿಖೆಯಿಂದ ಪತ್ತೆ ಹಚ್ಚಿದ್ದು, ಕೊಲೆಗೆ ಸಾಕ್ಷವಾಗಿ ಪರಿಗಣಿಸಿತ್ತು. ಈ ಕುರಿತು ಲೆಕ್ಕಪರಿಶೋಧಕರು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿಕೆ ನೀಡಿರುವುದು ಆರೋಪಿಗಳ ಮೇಲಿನ ಆರೋಪ ಸಾಬೀತು ಪಡಿಸಲು ಬಹಳಷ್ಟು ಸಹಕಾರವಾಗಿತ್ತು.
ಅಧಿಕಾರಿಗಳು ಪ್ರಕರಣದ ಜಾಡು ಹಿಡಿದು ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ತನಿಖಾಧಿಕಾರಿ ಚಂದ್ರಶೇಖರ್ ಅವರು ಭಾಸ್ಕರ್ ಶೆಟ್ಟಿ ಹಾಗೂ ಆರೋಪಿಗಳ ನೂರಾರು ಪೋನ್ ಕರೆ ದಾಖಲೆ(ಸಿಆರ್‌ಡಿ)ಗಳನ್ನು ಶೋಧಿಸಿದ್ದರು. ಈ ವೇಳೆ ಭಾಸ್ಕರ್ ಶೆಟ್ಟಿ, ವೀಲುನಾಮೆ ಬರೆಸಿದ್ದ ನ್ಯಾಯವಾದಿಗೆ ಹಲವು ಬಾರಿ ಫೋನ್ ಕರೆ ಮಾಡಿರುವುದನ್ನು ಪತ್ತೆ ಹಚ್ಚಲಾಗಿತ್ತು. ಇದರಿಂದಾಗಿ ಭಾಸ್ಕರ್ ಶೆಟ್ಟಿ ಕೊಲೆಗೆ ಮೊದಲು ಬರೆಸಿದ್ದ ವೀಲುನಾಮೆಯಲ್ಲಿ ಹಲವು ಮಹತ್ತರ ವಿಚಾರಗಳು ತಿಳಿದುಬಂತು. ಅಲ್ಲದೆ ನಿರಂಜನ್ ಭಟ್, ಕೊಲೆಗೆ ಮುನ್ನ ಮುಂಬೈಯಲ್ಲಿದ್ದ ತನ್ನ ಗೆಳೆಯ ಜೊತೆ ಮೂರ್ಛೆ ತಪ್ಪುವಂತೆ ಮಾಡುವ ಕ್ಲೋರೊಫಾರ್ಮ್, ಪಿಸ್ತೂಲ್ ಕೇಳಿದ್ದನು.
ಇದನ್ನು ಪತ್ತೆ ಹಚ್ಚಿದ್ದ ತನಿಖಾ ತಂಡ, ಆತ ಗೆಳೆಯನನ್ನು ಸಾಕ್ಷಿಯಾಗಿ ಪರಿಗಣಿಸಿತ್ತು. ಮೊಬೈಲ್ ಕರೆ ದಾಖಲೆಯನ್ನು ಸಂಗ್ರಹಿಸಿ ಆರೋಪಿಗಳು ಕೃತ್ಯ ನಡೆದ ಜು.28 ರಂದು ಯಾವ ಸ್ಥಳದಲ್ಲಿ ಇದ್ದರು ಎಂಬುದನ್ನು ಪತ್ತೆಹಚ್ಚಲಾಗಿತ್ತು. ಅದರಂತೆ ಆರೋಪಿಗಳು ಇಂದ್ರಾಳಿ ಮತ್ತು ನಂದಳಿಕೆಯಲ್ಲಿ ಇದ್ದರು ಎಂದು ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ಸಂದರ್ಭದಲ್ಲಿ ಆಗಿನ ಸಿಐಡಿ ಡಿಜಿಪಿ ಕಿಶೋರ್ ಚಂದ್ರ, ಎಡಿಜಿಪಿ ಪ್ರತಾಪ್ ರೆಡ್ಡಿ, ಡಿಐಜಿಪಿ ಸೋನಿಯಾ ನಾರಂಗ್, ಎಸ್ಪಿ ರಾಚಪ್ಪ ಮತ್ತು ಯಡ್ ಮಾರ್ಟಿನ್ ಸೇರಿದಂತೆ ಇಡೀ ತಂಡವೇ ಶ್ರಮ ಹಾಕಿತ್ತು. ಇವರೆಲ್ಲರು ಉಡುಪಿಗೆ ಆಗಮಿಸಿ ತನಿಖಾಧಿಕಾರಿ ಡಿವೈಎಸ್ಪಿ ಚಂದ್ರ ಶೇಖರ್ ಅವರ ತನಿಖೆಗೆ ಮಾರ್ಗದರ್ಶನಗಳನ್ನು ನೀಡಿದ್ದರು.
ಈ ನಡುವೆ ಸಿಐಡಿಗೆ ಮೊದಲು ತನಿಖಾಧಿಕಾರಿಯಾಗಿದ್ದ ಆಗಿನ ಕಾರ್ಕಳ ಎಎಸ್ಪಿ ಸುಮನಾ, ಆರೋಪಿಗಳ ತಪ್ಪೊಪ್ಪಿಗೆಯಂತೆ ನದಿಯಿಂದ ಮೂಳೆಗಳನ್ನು ತೆಗೆಯುಸುವಲ್ಲಿ ಯಶಸ್ವಿಯಾಗಿದ್ದರು. ಇದರೊಂದಿಗೆ ಸಿಐಡಿ ತಂಡ, ಭಾಸ್ಕರ್ ಶೆಟ್ಟಿ ತಂಗಿದ್ದ ಹೊಟೇಲಿನ ರೂಮಿನಲ್ಲಿ ತಲೆ ಕೂದಲು, ಮನೆ, ಕಾರು, ಹಾಗೂ ನಿರಂಜನ್ ಭಟ್‌ನ ನಂದಳಿಕೆಯ ಮನೆಯಲ್ಲಿ ರಕ್ತದ ಕಲೆಗಳನ್ನು ಪತ್ತೆ ಹಚ್ಚಿತ್ತು. ಇವುಗಳನ್ನು ಮತ್ತು ನದಿಯಲ್ಲಿ ಸಿಕ್ಕಿದ ಮೂಳೆ ಹಾಗೂ ಭಾಸ್ಕರ್ ಶೆಟ್ಟಿ ತಾಯಿ ಮತ್ತು ಸಹೋದರನ ರಕ್ತವನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಲ್ಲಿ ಬಂದ ಪಾಸಿಟಿವ್ ವರದಿಯು ಬಹು ಮುಖ್ಯ ವೈಜ್ಞಾನಿಕ ಸಾಕ್ಷವಾಯಿತು.
”ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣವು ಸಿಐಡಿಗೆ ಬಹಳ ದೊಡ್ಡ ಸವಾಲು ಆಗಿತ್ತು. ಇದರಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಇರಲಿಲ್ಲ. ಆದುದರಿಂದ ಸಾಂದರ್ಭಿಕ ಹಾಗೂ ವೈಜ್ಞಾನಿಕ ಸಾಕ್ಷಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದೆವು. ಸಿಐಡಿಯ ಮೇಲಾಧಿ ಕಾರಿಗಳ ಮಾರ್ಗದರ್ಶನ ಮತ್ತು ವಿಶೇಷ ಸರಕಾರಿ ಅಭಿಯೋಜಕ ಶಾಂತರಾಮ್ ಶೆಟ್ಟಿ ಅವರ ಪರಿಶ್ರಮ ಈ ಪ್ರಕರಣದಲ್ಲಿ ಪ್ರಮುಖವಾಗಿದೆ ಎಂದು ಭಾಸ್ಕರ್ ಶೆಟ್ಟಿ ಪ್ರಕರಣದ ತನಿಖಾಧಿಕಾರಿ ಸಿಐಡಿಯ ಡಿವೈಎಸ್ಪಿ ಎಸ್.ಟಿ. ಚಂದ್ರಶೇಖರ್ ತಿಳಿಸಿದ್ದಾರೆ.