ಡಿಸಿ ಜಗದೀಶ್‌ ವಿರುದ್ಧ ಪ್ರಕರಣ ದಾಖಲಿಸಿದ ಎಸಿಬಿ

ಕೋಲಾರ: ಜಿಲ್ಲಾ ಪಂಚಾಯಿತಿ ಸಿಇಒ ಹುದ್ದೆಯಿಂದ ನಿರ್ಗಮಿಸುವಾಗ ಬೀಳ್ಕೊಡುಗೆ ಸಮಾರಂಭದಲ್ಲಿ ಜಿಲ್ಲಾ ಪಿಡಿಒಗಳ ಸಂಘದಿಂದ ಉಡುಗೊರೆ ರೂಪದಲ್ಲಿ ಬೆಳ್ಳಿ ಗದೆ, ಕಿರೀಟ ಮತ್ತು ಚಿನ್ನದ ಉಂಗುರ ಪಡೆದ ಆರೋಪದ ಮೇಲೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ನ್ಯಾಯಾಲಯದ ಆದೇಶದಂತೆ ಭಾನುವಾರ ಪ್ರಕರಣ ದಾಖಲಿಸಿದೆ.

ಸದ್ಯ ಉಡುಪಿ ಜಿಲ್ಲಾಧಿಕಾರಿ ಆಗಿರುವ ಜಗದೀಶ್‌ ಅವರು ಈ ಹಿಂದೆ ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅವರನ್ನು 2019ರ ಆಗಸ್ಟ್‌ನಲ್ಲಿ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು.

ಬಳಿಕ ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತದ ವತಿಯಿಂದ 2019ರ ಆಗಸ್ಟ್‌ 23ರಂದು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಜಿಲ್ಲಾ ಪಿಡಿಒಗಳ ಸಂಘದ ಪದಾಧಿಕಾರಿಗಳು ಜಗದೀಶ್‌ ಅವರಿಗೆ ಬೆಳ್ಳಿ ಗದೆ, ಬೆಳ್ಳಿ ಕಿರೀಟ ಮತ್ತು ಚಿನ್ನದ ಉಂಗುರವನ್ನು ಸಮಾರಂಭದ ವೇದಿಕೆಯಲ್ಲಿ ಬಹಿರಂಗವಾಗಿ ಉಡುಗೊರೆ ರೂಪದಲ್ಲಿ ಕೊಟ್ಟಿದ್ದರು.

ಈ ಸಂಬಂಧ ಕೋಲಾರದ ಎಸ್.ನಾರಾಯಣಸ್ವಾಮಿ ಎಂಬ ಸಾಮಾಜಿಕ ಕಾರ್ಯಕರ್ತರು ಎಸಿಬಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ದಾಖಲೆ ಸಮೇತ ದೂರು ನೀಡಿ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸುವಂತೆ ಕೋರಿದ್ದರು. ಅಲ್ಲದೇ, ಕೋಲಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ತನಿಖೆಗೆ ಆದೇಶಿಸುವಂತೆ ಮನವಿ ಮಾಡಿದ್ದರು.

ಈ ಪ್ರಕರಣದ ವಿಚಾರಣೆ ಆರಂಭಿಸಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಂ.ಎಲ್.ರಘುನಾಥ್ ಅವರು ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಿ 2 ತಿಂಗಳೊಳಗೆ (ಆ.25ರೊಳಗೆ) ವರದಿ ನೀಡುವಂತೆ ಎಸಿಬಿ ಅಧಿಕಾರಿಗಳಿಗೆ ಆದೇಶಿಸಿದ್ದರು.

ಜಗದೀಶ್, 9 ಮಂದಿ ಪಿಡಿಒಗಳು ಮತ್ತು ಒಬ್ಬರು ಕಾರ್ಯ ನಿರ್ವಹಣಾಧಿಕಾರಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಅನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಧೀಶರು ಆದೇಶದಲ್ಲಿ ಸೂಚಿಸಿದ್ದರು.

ನ್ಯಾಯಾಲಯದ ಆದೇಶದನ್ವಯ ಎಸಿಬಿ ಅಧಿಕಾರಿಗಳು ಇದೀಗ ಜಗದೀಶ್‌ ಸೇರಿದಂತೆ 11 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಮಾರಂಭದ ವೇದಿಕೆಯಲ್ಲಿದ್ದ ಹಿಂದಿನ ಜಿಲ್ಲಾಧಿಕಾರಿ, ಹಾಲಿ ಬಿಬಿಎಂಪಿ ವಿಶೇಷ ಆಯುಕ್ತರಾಗಿರುವ ಜೆ.ಮಂಜುನಾಥ್ ಸೇರಿದಂತೆ 6 ಮಂದಿ ಅಧಿಕಾರಿಗಳನ್ನು ಪ್ರಕರಣದ ಸಾಕ್ಷಿಗಳಾಗಿ ಪರಿಗಣಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!