ಮಂಡ್ಯ ಜೂ.15: ರಾಮಜನ್ಮ ಭೂಮಿ ಹಗರಣ ಇಡೀ ದೇಶಕ್ಕೆ ಮಾಡಿದ ಅಪಮಾನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಇಂದು ನಡೆದ 100 ನಾಟ್ ಔಟ್ ಆಂದೋಲನದ ಅಂತಿಮ ದಿನದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು. ರಾಮ ಮಂದಿರ ನಿರ್ಮಾಣಕ್ಕೆ ಜನಸಾಮಾನ್ಯರು ತಮ್ಮ ಉಳಿತಾಯದ ಹಣವನ್ನು ದೇಣಿಗೆಯಾಗಿ ನೀಡಿದ್ದರು. ಇಟ್ಟಿಗೆಗಳನ್ನು ಕೊಟ್ಟಿದ್ದಾರೆ. ಆದರೆ ರಾಮಮಂದಿರ ನಿರ್ಮಾಣದಲ್ಲೇ ಅಕ್ರಮ ಎಸಗಿರುವುದು ದೇಶಕ್ಕೇ ದೊಡ್ಡ ಅಪಮಾನ ಎಂದು ಹೇಳಿದ್ದಾರೆ.
ಈ ವಿಚಾರವನ್ನು ಇಡೀ ದೇಶ ಖಂಡಿಸಬೇಕು ಎಂದ ಅವರು, ಜನ ಕೊಟ್ಟಿರುವ ದೇಣಿಗೆಯನ್ನು ಹಿಂದಿರುಗಿಸಬೇಕು. ಈ ಹಗರಣದಲ್ಲಿ ಭಾಗಿಯಾದವರನ್ನು ಬಂಧಿಸಿ, ಶಿಕ್ಷೆ ನೀಡಬೇಕು ಎಂದು ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರವನ್ನು ಆಗ್ರಹಿಸಿದರು.
ಇದು ರೈತರು, ವರ್ತಕರ ಕಾರ್ಯಕ್ರಮ. ಹೈರಾಣಾಗಿರುವ ಜನರ ಬದುಕು ಬದಲಿಸಲು ಈ ಹೋರಾಟ. 35 ರೂ ಬೆಲೆಯ ಪೆಟ್ರೋಲಿಗೆ 65 ರೂ. ತೆರಿಗೆ ಸೇರಿಸಲಾಗಿದೆ. ಎಲ್ಲ ಪಕ್ಷದವರೂ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ಸಿಕ್ಕಿದೆ. ಕೆಲವು ಕಡೆ ಬೆಲೆ ವ್ಯತ್ಯಾಸ ಕುರಿತು ಜನರಿಗೆ ಅರಿವು ಮೂಡಿಸಲು, ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಹಾಕಿಸಿಕೊಂಡವರಿಗೆ 50 ರುಪಾಯಿ ನೀಡಿ ಪ್ರತಿಭಟಿಸುತ್ತಿದ್ದಾರೆ.
ಕೆಲವರು ಸಿಹಿ ಹಂಚಿದರೆ, ಮತ್ತೆ ಕೆಲವರು ಜಾಗಟೆ ಬಾರಿಸಿ ಪ್ರತಿಭಟಿಸಿದ್ದಾರೆ. ಇದೇ ವೇಳೆ ಮಾತು ಮುಂದುವರೆಸಿದ ಅವರು, ಪೆಟ್ರೋಲ್ ಬೆಲೆ 52 ರುಪಾಯಿ ಆದಾಗ ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರು ಸೈಕಲ್ ತುಳಿದಿದ್ದ ಫೋಟೋ ನಮ್ಮ ಬಳಿ ಇದೆ. ಅದನ್ನು ಈಗ ಅವರಿಗೆ ಗಿಫ್ಟ್ ಆಗಿ ಕಳುಹಿಸಿ ಕೊಡುತ್ತೇನೆ. ಶೋಭಾ ಕರಂದ್ಲಾಜೆ ಅವರು ಗ್ಯಾಸ್ ಸಿಲಿಂಡರ್ ಅನ್ನು ತಲೆ ಮೇಲೆ ಹೊತ್ತುಕೊಂಡು ಹೋರಾಟ ಮಾಡಿದ್ದೇ ಮಾಡಿದ್ದು. ಈಗ ಅವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
| | |
Delhi flat nirmana yaarge Maadiddo.. yyar yyar duddalli madiddo..