ಮರವೂರು ಬಳಿ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯ ಸೇತುವೆ ಪಿಲ್ಲರ್ ಕುಸಿತ -ಸಂಚಾರ ಬದಲಾವಣೆಗೆ ಸೂಚನೆ
ಮಂಗಳೂರು: ಮಂಗಳೂರು ಹೊರವಲಯದ ಬಜ್ಪೆಯ ಮರವೂರು ಬಳಿ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯ ಸೇತುವೆಯ ಪಿಲ್ಲರ್ ಕುಸಿದ ಪರಿಣಾಮ ಸಂಚಾರ ಸ್ಥಗಿತಗೊಂಡಿದೆ.
ಹೊಸ ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಒಂದೇ ಭಾಗದಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಪರಿಣಾಮವಾಗಿ ಸೇತುವೆಯ ಪಿಲ್ಲರ್ ಕುಸಿದಿದ್ದು, ಸೇತುವೆಗೆ ಹಾನಿಯಾಗಿದೆ.
ಕಾವೂರು ಕಡೆಯಿಂದ ಕಟೀಲು, ಬಜ್ಪೆಗೆ ತೆರಳುವ ವಾಹನಗಳಿಗೂ ಸಂಚಾರಕ್ಕೆ ಅವಕಾಶ ಇಲ್ಲ. ಮಂಗಳೂರು ನಗರ ಭಾಗದಿಂದ ಬಜ್ಪೆಗೆ ತೆರಳಬೇಕಿದ್ದರೆ ಇನ್ನು ನಂತೂರು, ವಾಮಂಜೂರು, ಗುರುಪುರ, ಕೈಕಂಬ, ಬಜ್ಪೆ ಮೂಲಕ ಸುತ್ತು ಬಳಸಿ ತೆರಳಬೇಕಾಗಿದೆ. ಉಡುಪಿಯಿಂದ ಬರುವವರೂ ಮುಲ್ಕಿ, ಕಿನ್ನಿಗೋಳಿ, ಕಟೀಲು ಮಾರ್ಗವಾಗಿ ಬಜ್ಪೆಗೆ ಬರಬೇಕಾಗುತ್ತದೆ. ಮಂಗಳೂರು ಗ್ರಾಮೀಣ ಭಾಗದಿಂದ ನಗರಕ್ಕೆ ಪ್ರಮುಖ ಕೊಂಡಿಯಾಗಿದ್ದ ಸೇತುವೆ ಇಂದು ಕುಸಿಯುವ ಭೀತಿಯಲ್ಲಿದೆ. ಇಲ್ಲಿ ಹೊಸ ಸೇತುವೆ ಕಾಮಗಾರಿ ನಡಿಯುತ್ತಿದ್ದು, ಒಂದೇ ಭಾಗದಲ್ಲಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಸೇತುವೆ ಒಂದು ಭಾಗದ ಪಿಲ್ಲರ್ ಕುಸಿದು ಸೇತುವೆ ಬಿರುಕು ಬಿಟ್ಟಿದೆ.
ಮಂಗಳೂರು ನಗರದಿಂದ ಬರುವವರು ನಂತೂರಿನಲ್ಲಿ ತಿರುವು ಪಡೆದು ಕುಲಶೇಖರ–ಗುರುಪುರ ರಸ್ತೆಯಾಗಿ ವಿಮಾನ ನಿಲ್ದಾಣಕ್ಕೆ ತೆರಳುವಂತೆ ಸೂಚಿಸಲಾಗಿದೆ.
ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ