ಸೇವೆಯ ಮೂಲಕ ಪಕ್ಷದ ಹೆಸರನ್ನು ಎತ್ತಿ ಹಿಡಿಯುವ ಕಾಂಗ್ರೆಸ್ ಕಾರ್ಯಕರ್ತರು- ಮಾಜಿ ಸಚಿವ ಪ್ರಮೋದ್
ಉಡುಪಿ ಜೂ.14(ಉಡುಪಿ ಟೈಮ್ಸ್ ವರದಿ): ಕಾಂಗ್ರೆಸ್ ಪಕ್ಷ ಸೇವೆಯ ಪಕ್ಷವಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಹೇಳಿದ್ದಾರೆ.
ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕಳೆದ 20 ದಿನಗಳಿಂದ ನಡೆಯುತ್ತಿರುವ ಅಸಹಾಯಕರಿಗೆ ಆಹಾರ ನೀಡುವ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹಸಿದವರಿಗೆ ಅನ್ನ ನೀಡುವ ಕೆಲಸ ಮಾಡುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ದಿನ 100 ರಂತೆ 20 ದಿನಗಳಿಂದ ರೋಗಿಗಳಿಗೆ, ಅವರ ಆರೈಕೆ ಮಾಡುವ ಮನೆಯವರಿಗೆ ಆಹಾರ ನೀಡುವ ಕಾರ್ಯ ಮಾಡಿದೆ. ಈ ಸೇವೆಯ ಮೂಲಕ ಕಾಂಗ್ರೆಸ್ ಪಕ್ಷದ ಹೆಸರನ್ನು ಎತ್ತಿ ಹಿಡಿಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು, ಕೋವಿಡ್ ಸಂಕಷ್ಟದಲ್ಲಿ ಹಗಲಿರುಳು ದುಡಿದ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು.
ಇದೇ ವೇಳೆ ಈ ಸೇವೆಗೆ ಧನ ಸಹಾಯ ನೀಡಿ ಸಹಕರಿಸಿದ ಎಲ್ಲರಿಗೂ ಒಳಿತಾಗಲಿ ಎಂದು ಹಾರೈಸಿದ ಅವರು ಶೀಘ್ರವಾಗಿ ಎಲ್ಲೆಡೆ ಕೊರೋನಾ ಮುಕ್ತವಾಗಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನ, ಜಿಲ್ಲಾ ಕಾಂಗ್ರೆಸ್ ವಕ್ತಾರ ಕೃಷ್ಣ ಮೂರ್ತಿ ಆಚಾರ್ಯ, ನಗರ ಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಇಬ್ರಾಹಿಂ, ಶಬರೀಶ್ ಸುವರ್ಣ ಮೊದಲಾದವರು ಇದ್ದರು.