ತೈಲ ಬೆಲೆ ಏರಿಕೆ- ಅಣ್ಣಹಜಾರೆ, ರಾಮ್ ದೇವ್ ನಿತ್ಯಾನಂದ ಸ್ವಾಮಿಯ ದೇಶದಲ್ಲಿ ಅಡಗಿದ್ದಾರೆಯೇ: ಹರೀಶ್ ಕಿಣಿ
ಉಡುಪಿ: ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ನೇತೃತ್ವದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಗಳನ್ನು ದಿನದಿಂದ ದಿನಕ್ಕೆ ಏರಿಸುತ್ತಿರುವ ಕೇಂದ್ರ ಸರಕಾರದ ನೀತಿಯ ವಿರುದ್ಧ ಪ್ರತಿಭಟನೆಯನ್ನು ಸಂತೆಕಟ್ಟೆ ಪೆಟ್ರೋಲ್ ಬಂಕ್ ಬಳಿ ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು, ಕೇಂದ್ರ ಹಾಗೂ ರಾಜ್ಯ ಸರಕಾರ ಕೋವಿಡ್ ಸಮಯದಲ್ಲಿ ಯಾವ ಮುಲಾಜು ಇಲ್ಲದೆ ಪೆಟ್ರೋಲ್, ಡೀಸೆಲ್, ಗ್ಯಾಸ್ ವಿದ್ಯುತ್ ದರ ಏರಿಸುವ ಮೂಲಕ ಜನರ ಮೇಲೆ ಬರೆ ಹಾಕುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅಲೆವೂರು ಹರೀಶ್ ಕಿಣಿ ಮಾತನಾಡಿ, ಕೇಂದ್ರ ಸರಕಾರ ಅಧಿಕಾರಕ್ಕೆ ಬರುವಾಗ ಇಂಧನ ಬೆಲೆ ಕಡಿಮೆಗೊಳಿಸುವುದಾಗಿ ಹೇಳಿತ್ತು. ಇದೀಗ ಬೆಲೆ ವ್ಯಾಪಕವಾಗಿ ಏರಿಸಿ ಮಾಡುತ್ತಿದೆ. ಯು.ಪಿ.ಎ. ಅವಧಿಯಲ್ಲಿ ಬೆಲೆ ಏರಿಕೆಯಾದಾಗ ಎದ್ದು ಬಂದು ಪ್ರತಿಭಟಿಸುತ್ತಿದ್ದ ಅಣ್ಣ ಹಜಾರೆ, ಬಾಬಾ ರಾಮ್ ದೇವ್ ಈಗ ನಿತ್ಯಾನಂದ ಸ್ವಾಮಿಯ ಹೊಸ ದೇಶದಲ್ಲಿ ಹೋಗಿ ಅಡಗಿ ಕೂತಿದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್‌ರವರು ಸೈಕಲನ್ನು ಚಲಾಯಿಸಿ ಗಮನಸೆಳೆದರು. ಸಂಘಟನೆಯ ಸಂಯೋಜಕರುಗಳು ತಮ್ಮ ಮೋಟಾರು ವಾಹನವನ್ನು ರಸ್ತೆಯಲ್ಲಿ ದೂಡಿಕೊಂಡು, ಕಾಂಗ್ರೆಸ್ ಕಾರ್ಯಕರ್ತರು ಆಟೊ ರಿಕ್ಷಾವನ್ನು ರಸ್ತೆಯಲ್ಲಿ ದೂಡಿಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಬೆಲೆ ಏರಿಕೆಯ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗುತ್ತಾ ತಮ್ಮ ಆಕ್ರೋಶವನ್ನು ಕೇಂದ್ರ ಹಾಗೂ ರಾಜ್ಯ ಬಿಜೆಪಿಯ ಸರಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಹೊರಹಾಕಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವೆರೋನಿಕಾ ಕರ್ನೇಲಿಯೋ, ಡಾ. ಸುನಿತಾ ಶೆಟ್ಟಿ, ರಮೇಶ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಅಮೃತಾ, ಐರಿನ್ ಅಂದ್ರಾದೆ, ಸೂರ್ಯ ಸಾಲಿಯಾನ್, ಶಂಕರ್ ನಾಯಕ್, ರೋಶನ್ ಬೆರೆಟ್ಟೊ, ಸತೀಶ್ ಜಪ್ತಿ, ಮರೀನಾ, ರೋಸಲೀನ್, ಆಶಾ, ಶೋಭಾ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.