ಪ್ರಮೋದ್ ಮನೆಗೆ ಶಾಸಕ ರಘುಪತಿ ಭಟ್ ಭೇಟಿ – ಕಾರ್ಯಕರ್ತರಲ್ಲಿ ಮತ್ತೆ ಮನೆಮಾಡಿದ ಗೊಂದಲ!
ಉಡುಪಿ ಜೂ.14(ಉಡುಪಿ ಟೈಮ್ಸ್ ವರದಿ): ಮುಂಬರುವ ವಿಧಾನ ಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಉಳಿದಿದೆ. ಹೀಗಿರುವಾಗ ಉಡುಪಿ ಶಾಸಕ ರಘುಪತಿ ಭಟ್ ಅವರು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಮನೆಗೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಇಂದು ಉಪ್ಪೂರಿನಲ್ಲಿ ಹಡಿಲು ಭೂಮಿ ನಾಟಿ ಕಾರ್ಯಕ್ಕೆ ಶಾಸಕ ರಘುಪತಿ ಭಟ್ ಅವರು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರನ್ನು ಆಹ್ವಾನಿಸಿದ್ದರು. ಅದರಂತೆ ಕಾರ್ಯಕ್ರಮಕ್ಕೆ ತೆರಳಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಶಾಸಕ ರಘುಪತಿ ಭಟ್ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತಮ್ಮ ರಾಜಕೀಯ ಎದುರಾಳಿ ಬಿಜೆಪಿ ಶಾಸಕ ರಘುಪತಿ ಭಟ್ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಬಳಿಕ ತಮ್ಮ ಮನೆಗೂ ಶಾಸಕ ರಘುಪತಿ ಭಟ್ ಅವರನ್ನು ಆಹ್ವಾನಿಸಿದ್ದರು.
ಈ ವೇಳೆ ಶಾಸಕರು ಪ್ರಮೋದ್ ಮಧ್ವರಾಜ್ ಅವರ ಮನೆಯ ಗೋ ಶಾಲೆಗೆ ಭೇಟಿ ನೀಡಿದ್ದರು. ನಂತರ ಒಟ್ಟಿಗೆ ಉಪಾಹಾರ ಸೇವಿಸಿದ್ದಾರೆ. ಇದೀಗ ಇಬ್ಬರು ವಿರೋಧಿ ಬಣದ ನಾಯಕರ ನಡುವಿನ ಕುಶಲೋಪರಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.
ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರಮೋದ್ ಮಧ್ವರಾಜ್ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಎಲ್ಲೆಡೆ ಭಾರೀ ಸದ್ದು ಮಾಡಿತ್ತು. ಆದರೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ನಿಂದಲೇ ಸ್ಪರ್ಧಿಸಿ ರಘುಪತಿ ಭಟ್ ಅವರ ಎದುರು ಪರಾಭವಗೊಂಡಿದ್ದರು. ಬಿಜೆಪಿ ಶಾಸಕರ ಹಡಿಲು ಭೂಮಿ ಕೃಷಿ ಆಂದೋಲನದ ಬಗ್ಗೆ ಕಾಂಗ್ರೆಸ್ ನಾಯಕರು ಸಾಕಷ್ಟು ಟೀಕೆ ಮಾಡುತ್ತಿರುವ ಹೊತ್ತಿನಲ್ಲಿಯೇ ಪ್ರಮೋದ್ ಮಧ್ವರಾಜ್ ಅವರು ಖುದ್ದು ಭಾಗವಹಿಸಿ ಬೆಂಬಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.