ಲಸಿಕೆಯಿಂದ ದೇಹದಲ್ಲಿ ಯಾವುದೇ ಅಯಸ್ಕಾಂತೀಯ ಲಕ್ಷಣಗಳು ಉಂಟಾಗುವುದಿಲ್ಲ- ಜಿಲ್ಲಾಧಿಕಾರಿ
ಉಡುಪಿ ಜೂ.14(ಉಡುಪಿ ಟೈಮ್ಸ್ ವರದಿ): ಕೋವಿಡ್ ಲಸಿಕೆ ಪಡೆದ ಕಾರಣದಿಂದ ವ್ಯಕ್ತಿಯೊಬ್ಬರ ದೇಹದಲ್ಲಿ ಅಯಸ್ಕಾಂತೀಯ ಲಕ್ಷಣಗಳು ಕಂಡು ಬಂದಿದೆ ಎಂಬ ವೈರಲ್ ವಿಡಿಯೋ ಕುರಿತಾಗಿ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು, ಕೋವಿಡ್ ಲಸಿಕೆ ಪಡೆಯುವುದರಿಂದ ದೇಹದಲ್ಲಿ ಯಾವುದೇ ಅಯಸ್ಕಾಂತೀಯ ಲಕ್ಷಣಗಳು ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ವಿಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿರುವ ಅವರು, ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ಮಂದಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದು ಯಾರಲ್ಲಿಯೂ ಈ ರೀತಿಯ ಅಯಸ್ಕಾಂತೀಯ ಲಕ್ಷಣಗಳು ಕಂಡು ಬಂದಿಲ್ಲ . ಆದ್ದರಿಂದ ಕೋವಿಡ್ ಲಸಿಕೆ ಪಡೆಯುವುದರಿಂದ ಈ ರೀತಿಯ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ ಸ್ಪಷ್ಟಣೆ ನೀಡಿದ್ದಾರೆ. ವ್ಯಕ್ತಿ ಎ.28 ರಂದು ಲಸಿಕೆಯ ಮೊದಲ ಡೋಸ್ ಪಡೆದು ಕೊಂಡಿದ್ದಾರೆ. ವ್ಯಕ್ತಿಯ ದೇಹದಲ್ಲಿ ಅಯಸ್ಕಾಂತೀಯ ಲಕ್ಷಣಗಳು ಕಂಡು ಬಂದಿರುವ ಕಾರಣವನ್ನು ಪತ್ತೆ ಹಚ್ಚುವ ಸಲುವಾಗಿ, ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಈ ವೇಳೆ ವ್ಯಕ್ತಿಯ ಹಣೆ, ಬುಜ, ಬೆನ್ನು, ಹೊಟ್ಟೆ, ಮೊಣಕೈಯ ಭಾಗದಲ್ಲಿ ಅಯಸ್ಕಾಂತೀಯ ಲಕ್ಷಣಗಳು ಕಂಡು ಬಂದಿದೆ. ಅಲ್ಲದೆ ವ್ಯಕ್ತಿಗೆ ಬಿಪಿ, ಶುಗರ್ ಇರುವು ಕಂಡು ಬಂದಿದ್ದು ಅವರಿಗೆ ರಕ್ತ ಪರೀಕ್ಷೆ ಸೇರಿದಂತೆ ಇತರ ಬೇರೆ ಬೇರೆ ಪರೀಕ್ಷೆಗಳನ್ನು ನಡೆಸಲಾಗು ತ್ತಿದೆ. ಆದ್ದರಿಂದ ಈ ವ್ಯಕ್ತಿ ಯಾವ ಕಾರಣದಿಂದ ಅಯಸ್ಕಾಂತೀಯ ಲಕ್ಷಣಗಳು ಕಂಡು ಬಂದಿದೆ ಎಂಬುದನ್ನು ಪರೀಕ್ಷೆ ನಡೆಸಿ ಪತ್ತೆ ಹಚ್ಚಲಾಗುತ್ತಿದೆ. ಆದ್ದರಿಂದ ಯಾರೂ ಕೂಡಾ ಕೋವಿಡ್ ಲಸಿಕೆ ಬಗ್ಗೆ ವದಂತಿಗಳನ್ನು ನಂಬದೆ ಲಸಿಕೆ ಪಡೆಯುವಂತೆ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.