ಉಡುಪಿ: ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ಕ್ಕೆ (NH-66), ಕಾಪು ವಿಧಾನಸಭಾ ಕ್ಷೇತ್ರದ ಕಟಪಾಡಿ ಪ್ರದೇಶದಲ್ಲಿ ಅಂಡರ್ ಪಾಸಿನ ಅವಶ್ಯಕತೆಯಿದೆ ಎಂದು ಕ್ಷೇತ್ರದ ಜನತೆ ಹಲವಾರು ವರುಷಗಳಿಂದ ಬೇಡಿಕೆಯಿಟ್ಟಿದ್ದರು. ಹಲವಾರು ಬಾರಿ ಕೇಂದ್ರ ಭೂ ಸಾರಿಗೆ ಸಚಿವರನ್ನು ಭೇಟಿಯಾಗಿ ಸಂಸದೆ ಶೋಭಾ ಕರಂದ್ಲಾಜೆ ಮನವಿ ಸಲ್ಲಿಸಿದ್ದರು. ಹೆಚ್ಚಿನ ಜನ ಸಂಚಾರ ವಿರುವ ಕಾರಣದಿಂದ ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ‘ಅಂಡರ್ ಪಾಸಿನ/ಓವರ್ ಪಾಸ್’ ಅನಿವಾರ್ಯತೆ ಯಿದೆ ಎಂದು ಮನದಟ್ಟು ಮಾಡಿದ ಪರಿಣಾಮ ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಗ್ರೀನ್ ಸಿಗ್ನಲ್ ನೀಡಿದೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.
ಕ್ಷೇತ್ರದ ಜನರ ಅಪೇಕ್ಷೆಯಂತೆ, ಕೇಂದ್ರ ಸರಕಾರ ಕಟಪಾಡಿಯಲ್ಲಿ ಅಂಡರ್ ಪಾಸಿನ ಬದಲು, ‘ಓವರ್ ಪಾಸ್’ ನಿರ್ಮಿಸಲು ತಾತ್ವಿಕ ಅನುಮೋದನೆಯನ್ನು ನೀಡಿರುತ್ತದೆ. ಈ ಯೋಜನೆಯು ಕಾಪು ವಿಧಾನ ಸಭಾ ಕ್ಷೇತ್ರದ ಕಟಪಾಡಿ, ಬಂಟಕಲ್, ಶಿರ್ವ, ಮಟ್ಟು, ಬೆಳ್ಮಣ್ ಪ್ರದೇಶದ ನಿವಾಸಿಗಳಿಗೆ ಸಹಕಾರಿಯಾಗಲಿದೆ.
ವಿಸ್ತೃತ ಯೋಜನಾ ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಯಾರು ಮಾಡುತ್ತಿದೆ, ಮುಂದಿನ ತಿಂಗಳಲ್ಲಿ ಯೋಜನೆಯ ಪೂರ್ಣ ವಿವರಗಳು ಲಭ್ಯವಾಗಲಿದೆ. ಜನಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಕಟಪಾಡಿಯಲ್ಲಿ ಒಟ್ಟು ರೂ. 22.72 ಕೋಟಿಗಳ ವೆಚ್ಚದಲ್ಲಿ ಓವರ್ ಪಾಸ್ ಅನ್ನು ನಿರ್ಮಿಸಲು ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ, ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರಿಗೆ ಸಂಸದೆ ಶೋಭಾ ಕರಂದ್ಲಾಜೆ ಅಭಿನಂದಿಸಿದ್ದಾರೆ.
| | |