ರಾಮ ಮಂದಿರ ಟ್ರಸ್ಟ್ ಅಕ್ರಮ ಭೂ ಹಗರಣದಲ್ಲಿ ಭಾಗಿ: ಆಸ್ತಿಯ ಬೆಲೆ ನಿಮಿಷದಲ್ಲಿ ರೂ.2 ಕೋಟಿಯಿಂದ 18.5ಕೋ. ಮಾರಾಟ- ಎಸ್ಪಿ ಆರೋಪ
ಲಕ್ನೋ ಜೂ.14: ಕಳೆದ ವರ್ಷ ಕೇಂದ್ರ ಸರಕಾರ ಸ್ಥಾಪಿಸಿದ ರಾಮ ಮಂದಿರ ಟ್ರಸ್ಟ್ ಅಕ್ರಮ ಭೂ ಹಗರಣದಲ್ಲಿ ಭಾಗಿಯಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಉತ್ತರ ಪ್ರದೇಶದ ಎರಡು ವಿರೋಧ ಪಕ್ಷಗಳಾದ ಸಮಾಜವಾದಿ ಪಕ್ಷ (ಎಸ್ಪಿ) ಹಾಗೂ ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ. ಹಾಗೂ ಈ ಪ್ರಕರಣದ ಕುರಿತು ಟ್ವಿಟರ್ ನಾದ್ಯಂತ #RamMandirScam ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.
ಮಾರ್ಚ್ ನಲ್ಲಿ ಈ ವ್ಯವಹಾರ ನಡೆದಿದೆ ಎಂದು ಈ ಎರಡೂ ವಿರೋಧ ಪಕ್ಷಗಳು ಹೇಳಿಕೊಂಡಿದ್ದು, ಇದರಲ್ಲಿ ಇಬ್ಬರು ರಿಯಲ್ ಎಸ್ಟೇಟ್ ಡೀಲರ್ ಗಳು ಒಬ್ಬ ವ್ಯಕ್ತಿಯಿಂದ 2ಕೋಟಿ ರೂ.ಗೆ ಆಸ್ತಿಯನ್ನು ಖರೀದಿಸಿ ಅದನ್ನು ನಿಮಿಷಗಳ ನಂತರ ಟ್ರಸ್ಟ್ ಗೆ 18.5 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆದರೆ ರಾಮ ಮಂದಿರ ದೇವಾಲಯದ ಟ್ರಸ್ಟ್ ಈ ಆರೋಪವನ್ನು ಕ್ಷುಲ್ಲಕವೆಂದು ತಳ್ಳಿ ಹಾಕಿದೆ ಎಂದು ತಿಳಿದು ಬಂದಿದೆ.
ಈ ನಡುವೆ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಎಎಪಿ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು, ಭಗವಾನ್ ರಾಮನ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯಲಿದೆ ಎಂದು ಯಾರೂ ಊಹಿಸಲೂ ಸಾಧ್ಯವಿಲ್ಲ. ಆದರೆ ಈ ದಾಖಲೆಗಳು ಕೋಟ್ಯಂತರ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿವೆ ಎಂದು ತೋರಿಸುತ್ತದೆ” ಎಂದು ಹೇಳಿದ್ದರು.
ಇದರೊಂದಿಗೆ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕೆಲವು ಟ್ರಸ್ಟ್ ನ ಸದಸ್ಯರ ಸಹಕಾರದಿಂದಾಗಿ ಮೋಸದ ಭೂ ವ್ಯವಹಾರ ನಡೆದಿದೆ ಎಂದು ಸಮಾಜವಾದಿ ಪಕ್ಷದ ಮಾಜಿ ಶಾಸಕ ಹಾಗೂ ಉತ್ತರ ಪ್ರದೇಶದ ಮಾಜಿ ಸಚಿವ ಪವನ್ ಪಾಂಡೆ ಆರೋಪಿಸಿದ್ದು, “ಈ ಆಸ್ತಿಯ ಬೆಲೆಯು ನಿಮಿಷಗಳಲ್ಲಿ ರೂ.2 ಕೋಟಿಯಿಂದ ರೂ.18.5 ಕೋಟಿಗೆ ಏರಿದೆ. ಇದರರ್ಥ16.5ಕೋ.ರೂ. ಲೂಟಿಯಾಗಿದೆ. ಇದರ ಸಿಬಿಐ ವಿಚಾರಣೆ ನಡೆಯಬೇಕು’’ ಎಂದು ಎಸ್ಪಿ ನಾಯಕ ಆಗ್ರಹಿಸಿದ್ದಾರೆ.
“ರಾಮಮಂದಿರವು ದೇಶದ ಹಲವಾರು ಭಕ್ತರ ಪಾಲಿಗೆ ನಂಬಿಕೆಯ ವಿಷಯವಾದರೆ ಬಿಜೆಪಿ ಪಕ್ಷಕ್ಕೆ ಅದೊಂದು ಮಾರಾಟದ ಸರಕು ಮಾತ್ರ” ಎಂದು ಟ್ಟೀಟ್ ಬಳಕೆದಾರರೋರ್ವರು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಈಗಾಗಲೇ ಟ್ವಿಟರ್ ನಲ್ಲಿ 40,000ಕ್ಕೂ ಹೆಚ್ಚು #RamMandirScam ಹ್ಯಾಶ್ ಟ್ಯಾಗ್ ಅನ್ನು ಬಳಸಲಾಗಿದ್ದು, ದೇಶದಾದ್ಯಂತ ಟ್ರೆಂಡಿಂಗ್ ಆಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ದೇವಾಲಯದ ನಿರ್ಮಾಣದ ಮೇಲ್ವಿಚಾರಣೆ ಹಾಗೂ ನಿರ್ವಹಣೆಗೆ 2020 ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರವು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಎಂಬ ಟ್ರಸ್ಟ್ ಸ್ಥಾಪಿಸಿತ್ತು. ತೀರ್ಪಿನಲ್ಲಿ ಸುಮಾರು 70ಎಕರೆ ಭೂಮಿಯನ್ನು ನೀಡಲಾಯಿತು ಹಾಗೂ ಅದರ15 ಸದಸ್ಯರಲ್ಲಿ 12 ಮಂದಿಯನ್ನು ಕೇಂದ್ರವು ನಾಮ ನಿರ್ದೇಶನ ಮಾಡಿದೆ.